Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಗಲಾತ್ಯದವರಿಗೆ 3 - ಕನ್ನಡ ಸತ್ಯವೇದವು J.V. (BSI)


ನೇಮನಿಷ್ಠೆಗಳಿಂದಲ್ಲ ನಂಬಿಕೆಯಿಂದಲೇ ನೀತಿವಂತರಾಗುತ್ತೇವೆಂಬದಕ್ಕೆ ಪ್ರಮಾಣ

1 ಎಲೈ ಬುದ್ಧಿಯಿಲ್ಲದ ಗಲಾತ್ಯದವರೇ, ಯಾರು ನಿಮ್ಮನ್ನು ಮರುಳುಗೊಳಿಸಿದರು? ಯೇಸು ಕ್ರಿಸ್ತನು ಶಿಲುಬೆಗೆ ಹಾಕಿಸಿಕೊಂಡವನಾಗಿ ನಿಮ್ಮ ಕಣ್ಣೆದುರಿನಲ್ಲಿ ವರ್ಣಿಸಲ್ಪಟ್ಟನಲ್ಲವೇ.

2 ಒಂದು ಸಂಗತಿಯನ್ನು ಮಾತ್ರ ನಿವ್ಮಿುಂದ ತಿಳುಕೊಳ್ಳಬೇಕೆಂದಿದ್ದೇನೆ. ನೀವು ದೇವರಾತ್ಮನನ್ನು ಹೊಂದಿದ್ದು ನೇಮನಿಷ್ಠೆಗಳನ್ನು ಅನುಸರಿಸಿದ್ದರಿಂದಲೋ? ಕೇಳಿ ನಂಬಿದ್ದರಿಂದಲೋ?

3 ಇಷ್ಟು ಬುದ್ಧಿಯಿಲ್ಲದವರಾಗಿದ್ದೀರಾ? ದೇವರಾತ್ಮಾನುಸಾರವಾಗಿ ಪ್ರಾರಂಭಿಸಿ ಈಗ ಬಹಿರಾಚಾರಗಳಿಂದ ಸಿದ್ಧಿಗೆ ಬರಬೇಕೆಂದಿದ್ದೀರಾ?

4 ನೀವು ಅಷ್ಟು ಬಾಧೆಗಳನ್ನು ಅನುಭವಿಸಿದ್ದು ವ್ಯರ್ಥವೋ? ವ್ಯರ್ಥವೇ ಎಂದು ಹೇಳಬೇಕೇನು?

5 ದೇವರು ತನ್ನ ಆತ್ಮನನ್ನು ನಿಮಗೆ ಹೇರಳವಾಗಿ ಕೊಟ್ಟು ನಿಮ್ಮಲ್ಲಿ ಮಹತ್ಕಾರ್ಯಗಳನ್ನು ನಡಿಸುತ್ತಾ ಬಂದದ್ದು ಯಾತರಿಂದಾಯಿತು? ನೀವು ನೇಮನಿಷ್ಠೆಗಳನ್ನನುಸರಿಸಿದ್ದರಿಂದಲೋ? ಕೇಳಿ ನಂಬಿದ್ದರಿಂದಲೋ? ನಂಬಿದ್ದರಿಂದಲೇ.

6 ಅಬ್ರಹಾಮನು ದೇವರನ್ನು ನಂಬಿದನು, ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು ಎಂಬದಾಗಿ ಬರೆದದೆಯಲ್ಲಾ.

7 ಆದದರಿಂದ ನಂಬುವವರೇ ಅಬ್ರಹಾಮನ ಮಕ್ಕಳೆಂದು ತಿಳಿದುಕೊಳ್ಳಿರಿ.

8 ದೇವರು ಅನ್ಯಜನರನ್ನು ನಂಬಿಕೆಯ ನಿವಿುತ್ತವಾಗಿಯೇ ನೀತಿವಂತರೆಂದು ನಿರ್ಣಯಿಸುವನೆಂಬದಾಗಿ ಶಾಸ್ತ್ರವು ಮೊದಲೇ ಕಂಡು ಅಬ್ರಹಾಮನಿಗೆ - ನಿನ್ನ ಮೂಲಕ ಎಲ್ಲಾ ಜನಾಂಗಗಳವರಿಗೆ ಆಶೀರ್ವಾದವುಂಟಾಗುವದೆಂಬ ಶುಭವರ್ತಮಾನವನ್ನು ಮುಂಚಿತವಾಗಿಯೇ ತಿಳಿಸಿತು.

9 ಹೀಗಿರಲಾಗಿ ನಂಬುವವರು ನಂಬಿಕೆಯಿಟ್ಟ ಅಬ್ರಹಾಮನೊಂದಿಗೆ ಸೌಭಾಗ್ಯವನ್ನು ಹೊಂದುವರು.

10 ನೇಮನಿಷ್ಠೆಗಳನ್ನು ಆಧಾರಮಾಡಿಕೊಳ್ಳುವವರೆಲ್ಲರೂ ಶಾಪಾಧೀನರಾಗಿದ್ದಾರೆ. ಹೇಗಂದರೆ, ಧರ್ಮಗ್ರಂಥದೊಳಗೆ ಬರೆದಿರುವವುಗಳನ್ನೆಲ್ಲಾ ನಿತ್ಯವೂ ಕೈಕೊಳ್ಳದಿರುವ ಪ್ರತಿಯೊಬ್ಬನು ಶಾಪಗ್ರಸ್ತನೆಂದು ಶಾಸ್ತ್ರದಲ್ಲಿ ಬರೆದದೆ.

11 ಇದಲ್ಲದೆ ಕರ್ಮಮಾರ್ಗದಿಂದ ಯಾವನೂ ದೇವರ ಸನ್ನಿಧಿಯಲ್ಲಿ ನೀತಿವಂತನಾಗುವದಿಲ್ಲವೆಂಬದು ಸ್ಪಷ್ಟವಾಗಿದೆ. ಯಾಕಂದರೆ ನೀತಿವಂತನು ನಂಬಿಕೆಯಿಂದಲೇ ಬದುಕುವನೆಂದು ಬರೆದದೆ.

12 ಆದರೆ ಕರ್ಮಮಾರ್ಗಕ್ಕೆ ನಂಬಿಕೆಯು ಆಧಾರವಲ್ಲ, ಅದರ ನೇಮಗಳನ್ನು ಆಚರಿಸಿದವನೇ ಅವುಗಳ ಮೂಲಕ ಬದುಕುವನು ಎಂದು ಬರೆದದೆ.

13 ಅಬ್ರಹಾಮನಿಗೆ ಉಂಟಾದ ಆಶೀರ್ವಾದವು ಕ್ರಿಸ್ತ ಯೇಸುವಿನಲ್ಲಿ ಅನ್ಯಜನರಿಗೆ ಉಂಟಾಗುವಂತೆಯೂ ದೇವರು ವಾಗ್ದಾನಮಾಡಿದ ಆತ್ಮನು ನಮಗೆ ನಂಬಿಕೆಯ ಮೂಲಕ ದೊರಕುವಂತೆಯೂ

14 ಕ್ರಿಸ್ತನು ನಮ್ಮ ನಿವಿುತ್ತ ಶಾಪವಾಗಿ ಧರ್ಮಶಾಸ್ತ್ರದಲ್ಲಿ ಹೇಳಿರುವ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು. ಮರಕ್ಕೆ ತೂಗಹಾಕಲ್ಪಟ್ಟ ಪ್ರತಿಯೊಬ್ಬನು ಶಾಪಗ್ರಸ್ತನು ಎಂದು ಶಾಸ್ತ್ರದಲ್ಲಿ ಬರೆದದೆಯಲ್ಲಾ.

15 ಸಹೋದರರೇ, ಲೋಕದ ವ್ಯವಹಾರವನ್ನು ಹಿಡಿದು ಮಾತಾಡುತ್ತೇನೆ. ಸ್ಥಿರಪಡಿಸಿದ ಒಂದು ಒಡಂಬಡಿಕೆಯು ಕೇವಲ ಮನುಷ್ಯನದಾಗಿದ್ದರೂ ಅದನ್ನು ಯಾರೂ ರದ್ದು ಮಾಡುವದಿಲ್ಲ, ಅದಕ್ಕೆ ಹೆಚ್ಚು ಮಾತುಗಳನ್ನು ಕೂಡಿಸುವದಿಲ್ಲ.

16 ಒಳ್ಳೇದು, ದೇವರು ಅಬ್ರಹಾಮನಿಗೂ ಅವನ ಸಂತತಿಗೂ ವಾಗ್ದಾನಗಳನ್ನು ಮಾಡಿದನು. ಆತನು ನಿನ್ನ ಸಂತತಿಗಳಿಗೆ ಎಂದು ಹೇಳಿ ಅನೇಕರನ್ನು ಸೂಚಿಸದೆ ನಿನ್ನ ಸಂತತಿಗೆ ಎಂದು ಹೇಳಿ ಒಬ್ಬನನ್ನೇ ಸೂಚಿಸುತ್ತಾನೆ. ಆ ಒಬ್ಬನು ಕ್ರಿಸ್ತನೇ.

17 ನನ್ನ ತಾತ್ಪರ್ಯವೇನಂದರೆ, ದೇವರು ಮೊದಲು ಸ್ಥಿರಪಡಿಸಿದ ಒಡಂಬಡಿಕೆಯನ್ನು ನಾನೂರಮೂವತ್ತು ವರುಷಗಳ ಮೇಲೆ ಬಂದ ಧರ್ಮಶಾಸ್ತ್ರವು ರದ್ದುಮಾಡಿ ಆ ವಾಗ್ದಾನವನ್ನು ವ್ಯರ್ಥಮಾಡುವದಿಲ್ಲ.

18 ಆ ಬಾಧ್ಯತೆಯು ಕರ್ಮಮಾರ್ಗದಿಂದ ದೊರೆಯುವದಾದರೆ ಅದು ಇನ್ನು ವಾಗ್ದಾನದಿಂದ ದೊರೆಯುವದಲ್ಲವೆಂದಾಯಿತು; ಆದರೆ ದೇವರು ಅದನ್ನು ಅಬ್ರಹಾಮನಿಗೆ ವಾಗ್ದಾನದ ಮೂಲಕವಾಗಿಯೇ ದಯಪಾಲಿಸಿದ್ದಾನೆ.


ನಂಬಿಕೆಯು ಸಾಕಾಗಿದ್ದರೆ ಮೋಶೆಯ ಧರ್ಮಶಾಸ್ತ್ರವು ಯಾಕೆ?

19 ಹಾಗಾದರೆ ಮೋಶೆಯ ಧರ್ಮಶಾಸ್ತ್ರವು ಯಾತಕ್ಕೆ? ವಾಗ್ದಾನದಲ್ಲಿ ಸೂಚಿತನಾದವನು ಹುಟ್ಟಿ ಬರುವ ತನಕ ದೇವರು ಇಂಥಿಂಥದು ಅಪರಾಧವೆಂದು ತೋರಿಸುವದಕ್ಕಾಗಿ ಅದನ್ನು ವಾಗ್ದಾನದ ತರುವಾಯ ನೇವಿುಸಿ ದೇವದೂತರ ಮುಖಾಂತರ ಒಬ್ಬ ಮಧ್ಯಸ್ಥನ ಕೈಯಲ್ಲಿ ಕೊಟ್ಟನು.

20 ಒಂದೇ ಪಕ್ಷವಿದ್ದರೆ ಮಧ್ಯಸ್ಥನು ಬೇಕಿಲ್ಲ, ದೇವರಾದರೋ ಒಬ್ಬನೇ.

21 ಹಾಗಾದರೆ ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರುದ್ಧವೋ? ಹಾಗೆ ಎಂದಿಗೂ ತಿಳುಕೊಳ್ಳಬಾರದು. ಬದುಕಿಸುವದಕ್ಕೆ ಶಕ್ತವಾಗಿರುವ ಧರ್ಮಶಾಸ್ತ್ರವು ಕೊಡಲ್ಪಟ್ಟಿದ್ದರೆ ಸಂದೇಹವಿಲ್ಲದೆ ಕರ್ಮಮಾರ್ಗದಿಂದಲೇ ನೀತಿಯುಂಟಾಗುತ್ತಿತ್ತು.

22 ಹಾಗಾಗದೆ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವದರಿಂದ ಉಂಟಾಗುವ ಆ ವಾಗ್ದಾನದ ಫಲವು ನಂಬುವವರಿಗೇ ಕೊಡಲ್ಪಡಬೇಕೆಂದು ಶಾಸ್ತ್ರವು ಸಮಸ್ತವನ್ನು ಪಾಪಕ್ಕೊಳಗಾಗಿದೆಯೆಂದು ತೀರ್ಮಾನಿಸಿತು.

23 ಕ್ರಿಸ್ತನಂಬಿಕೆಯ ಕಾಲ ಬರುವದಕ್ಕೆ ಮೊದಲು ನಾವು ಮುಂದಕ್ಕೆ ಪ್ರಕಟವಾಗಬೇಕಾಗಿದ್ದ ಆ ನಂಬಿಕೆಗೆ ವಶವಾಗುವದಕ್ಕಾಗಿ ಧರ್ಮಶಾಸ್ತ್ರದ ಕೈಕೆಳಗೆ ಕಾವಲಲ್ಲಿ ಮುಚ್ಚಲ್ಪಟ್ಟಿದ್ದೆವು.

24 ಹೀಗಿರಲಾಗಿ ಧರ್ಮಶಾಸ್ತ್ರವು ನಮ್ಮನ್ನು ಕಾಯುವ ಆಳಿನಂತಾಗಿದೆ; ನಾವು ನಂಬಿಕೆಯಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದುವದಕ್ಕಾಗಿ ಕ್ರಿಸ್ತನಲ್ಲಿಗೆ ಸೇರುವ ತನಕ ಅದು ನಮ್ಮನ್ನು ಕಾಯುತ್ತದೆ.

25 ಆದರೆ ಕ್ರಿಸ್ತ ನಂಬಿಕೆಯು ಬಂದಿರಲಾಗಿ ನಾವಿನ್ನು ಕಾಯುವವನ ಕೈಕೆಳಗಿರುವವರಲ್ಲ.

26 ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿಟ್ಟಿರುವ ನಂಬಿಕೆಯ ಮೂಲಕ ದೇವರ ಪುತ್ರರಾಗಿದ್ದೀರಿ.

27 ಹೇಗಂದರೆ ಕ್ರಿಸ್ತನಲ್ಲಿ ಸೇರುವದಕ್ಕೆ ದೀಕ್ಷಾಸ್ನಾನಮಾಡಿಸಿಕೊಂಡಿರುವ ನೀವೆಲ್ಲರು ಕ್ರಿಸ್ತನನ್ನು ಧರಿಸಿಕೊಂಡಿರಿ.

28 ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ, ಆಳು ಒಡೆಯ ಎಂದೂ, ಗಂಡು ಹೆಣ್ಣು ಎಂದೂ ಭೇದವಿಲ್ಲ.

29 ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರೂ ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು