Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಗಲಾತ್ಯದವರಿಗೆ 2 - ಕನ್ನಡ ಸತ್ಯವೇದವು J.V. (BSI)

1 ಹದಿನಾಲ್ಕು ವರುಷಗಳಾದ ಮೇಲೆ ನಾನು ತೀತನನ್ನು ಕರೆದುಕೊಂಡು ಬಾರ್ನಬನ ಜೊತೆಯಲ್ಲಿ ತಿರಿಗಿ ಯೆರೂಸಲೇವಿುಗೆ ಹೋದೆನು.

2 ದೈವಪ್ರೇರಣೆಗನುಸಾರವಾಗಿ ಹೋದೆನು. ಅನ್ಯಜನರಲ್ಲಿ ನಾನು ಸಾರುವ ಸುವಾರ್ತೆಯು ಏನೆಂಬದನ್ನು ಅಲ್ಲಿದ್ದವರಿಗೆ ತಿಳಿಸಿದೆನು. ಆದರೆ ನಾನು ಪಡುತ್ತಿರುವ ಪ್ರಯಾಸವಾಗಲಿ ಪಟ್ಟ ಪ್ರಯಾಸವಾಗಲಿ ನಿಷ್ಫಲವಾಗಬಾರದೆಂದು ಮಾನಿಷ್ಠರಿಗೆ ಏಕಾಂತದಲ್ಲಿ ತಿಳಿಸಿದೆನು.

3 ನನ್ನ ಜೊತೆಯಲ್ಲಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸುನ್ನತಿಯಾಗಬೇಕೆಂದು ಯಾರೂ ಬಲಾತ್ಕಾರ ಮಾಡಲಿಲ್ಲ.

4 ಸಭೆಗೆ ಕಳ್ಳತನದಿಂದ ಸೇರಿಕೊಂಡ ಸುಳ್ಳು ಸಹೋದರರು ಅಲ್ಲಿ ಇದ್ದದರಿಂದ ಬಲಾತ್ಕಾರ ನಡೆದೀತೆಂಬ ಭಯವಿತ್ತು. ಅವರು ನಮ್ಮನ್ನೂ ದಾಸತ್ವದೊಳಗೆ ಸಿಕ್ಕಿಸಬೇಕೆಂದು ಕ್ರಿಸ್ತ ಯೇಸುವಿನಲ್ಲಿ ನಮಗೆ ದೊರಕಿರುವ ಸ್ವಾತಂತ್ರ್ಯವನ್ನು ಗೂಢವಾಗಿ ವಿಚಾರಿಸುವದಕ್ಕೆ ಮರಸಿಕೊಂಡು ಬಂದವರು.

5 ಸುವಾರ್ತೆಯ ಸತ್ಯಾರ್ಥವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂದು ನಾವು ಅವರಿಗೆ ವಶವಾಗುವದಕ್ಕೆ ಒಂದು ಗಳಿಗೆ ಹೊತ್ತಾದರೂ ಸಮ್ಮತಿಪಡಲಿಲ್ಲ.

6 ಆದರೆ ಮಾನಿಷ್ಠರೆನಿಸಿಕೊಂಡವರಿಂದ ನನಗೇನೂ ದೊರೆಯಲಿಲ್ಲ. ಅವರು ಹಿಂದಿನ ಕಾಲದಲ್ಲಿ ಎಂಥವರಾಗಿದ್ದರೋ ನನಗೆ ಲಕ್ಷ್ಯವಿಲ್ಲ. ದೇವರು ಮುಖದಾಕ್ಷಿಣ್ಯ ಮಾಡುವವನಲ್ಲ. ಮಾನಿಷ್ಠರೆನಿಸಿಕೊಂಡವರು ನನ್ನ ಮಾತಿಗೆ ಒಪ್ಪಿದರೇ ಹೊರತು ನನಗೇನೂ ಕಲಿಸಲಿಲ್ಲ.

7 ಸುನ್ನತಿಯಾದವರಲ್ಲಿ ಅಪೊಸ್ತಲತನವನ್ನು ನಡಿಸುವದಕ್ಕೋಸ್ಕರ ಪೇತ್ರನನ್ನು ಪ್ರೇರಿಸಿದಾತನು ಅನ್ಯಜನರಲ್ಲಿ ಅದನ್ನು ನಡಿಸುವದಕ್ಕೆ ನನ್ನನ್ನೂ ಪ್ರೇರಿಸಿದ್ದನು.

8 ಸುನ್ನತಿಯಾದವರಿಗೆ ಸುವಾರ್ತೆಯನ್ನು ಸಾರುವ ಕೆಲಸವು ಹೇಗೆ ಪೇತ್ರನಿಗೆ ಕೊಡಲ್ಪಟ್ಟಿತೋ ಹಾಗೆಯೇ ಸುನ್ನತಿಯಿಲ್ಲದವರಿಗೆ ಅದನ್ನು ಸಾರುವ ಕೆಲಸವು ನನಗೆ ಕೊಟ್ಟಿರುವದನ್ನು

9 ಸಭಾಸ್ತಂಭಗಳೆಂದು ಹೆಸರುಗೊಂಡಿರುವ ಯಾಕೋಬ ಕೇಫ ಯೋಹಾನರು ಕಂಡು ದೇವರು ನನಗೆ ದಯಪಾಲಿಸಿರುವ ವರವನ್ನು ತಿಳುಕೊಂಡು ಐಕ್ಯವನ್ನು ತೋರಿಸುವದಕ್ಕಾಗಿ ನನಗೂ ಬಾರ್ನಬನಿಗೂ ಬಲಗೈ ಕೊಟ್ಟು - ನೀವು ಅನ್ಯಜನರ ಬಳಿಗೆ ಹೋಗಿರಿ, ನಾವು ಸುನ್ನತಿಯವರ ಬಳಿಗೆ ಹೋಗುತ್ತೇವೆ ಅಂದರು.

10 ಆದರೆ ನೀವು ನಮ್ಮಲ್ಲಿರುವ ಬಡವರನ್ನು ಜ್ಞಾಪಕಮಾಡಿಕೊಳ್ಳಬೇಕೆಂಬ ಒಂದೇ ಸಂಗತಿಯನ್ನು ಬೇಡಿಕೊಂಡರು; ಇದನ್ನು ಮಾಡುವದರಲ್ಲಿ ನಾನೂ ಆಸಕ್ತನಾಗಿದ್ದೆನು.


ಪೌಲನು ತಾನು ಅಂತಿಯೋಕ್ಯದಲ್ಲಿ ಪೇತ್ರನನ್ನು ಖಂಡಿಸಿದ ಸಂಗತಿಯನ್ನು ತಕ್ಕೊಂಡು ಕ್ರಿಸ್ತನನ್ನು ನಂಬಿರುವವರಿಗೆ ಮೋಶೆಯ ಧರ್ಮಶಾಸ್ತ್ರಾಚಾರಗಳು ಅವಶ್ಯವಿಲ್ಲವೆಂದು ಪ್ರಸ್ತಾಪಿಸಿದ್ದು

11 ಕೇಫನು ಅಂತಿಯೋಕ್ಯಕ್ಕೆ ಬಂದಾಗ ಅವನು ದೋಷಿಯಾಗಿ ಕಾಣಿಸಿಕೊಂಡದರಿಂದ ನಾನು ಅವನನ್ನು ಮುಖಾಮುಖಿಯಾಗಿ ಎದುರಿಸಿದೆನು.

12 ಯಾಕಂದರೆ ಯಾಕೋಬನ ಕಡೆಯಿಂದ ಕೆಲವರು ಬರುವದಕ್ಕೆ ಮುಂಚೆ ಅವನು ಅನ್ಯಜನರ ಸಂಗಡ ಊಟಮಾಡುತ್ತಿದ್ದನು; ಅವರು ಬಂದ ಮೇಲೆ ಸುನ್ನತಿಯವರಾದ ಅವರಿಗೆ ಅವನು ಭಯಪಟ್ಟು ಅನ್ಯಜನರನ್ನು ಬಿಟ್ಟು ತನ್ನನ್ನು ಪ್ರತ್ಯೇಕಿಸಿಕೊಂಡನು.

13 ಇದಲ್ಲದೆ ವಿುಕ್ಕಾದ ಯೆಹೂದ್ಯರೂ ಅವನೊಂದಿಗೆ ಸೇರಿ ಹಾಗೆಯೇ ಕಪಟ ಮಾಡಿದರು; ಹೀಗೆ ಬಾರ್ನಬನೂ ಅವರ ಕಪಟದ ಸೆಳವಿಗೆ ಬಿದ್ದನು.

14 ಅವರು ಸುವಾರ್ತೆಯ ಸತ್ಯಾರ್ಥದ ಪ್ರಕಾರ ನೆಟ್ಟಗೆ ನಡೆಯುವದಿಲ್ಲವೆಂದು ನಾನು ಕಂಡಾಗ ಎಲ್ಲರ ಮುಂದೆ ಕೇಫನಿಗೆ ಹೇಳಿದ್ದೇನಂದರೆ - ನೀನು ಯೆಹೂದ್ಯನಾಗಿದ್ದು ಯೆಹೂದ್ಯರಂತೆ ನಡೆಯದೆ ಅನ್ಯಜನರಂತೆ ನಡೆದ ಮೇಲೆ ಅನ್ಯಜನರಿಗೆ - ನೀವು ಯೆಹೂದ್ಯರ ಪದ್ಧತಿಗಳನ್ನು ಅನುಸರಿಸಬೇಕೆಂದು ನೀನು ಬಲಾತ್ಕಾರ ಮಾಡುವದು ಹೇಗೆ?

15 ನಾವಂತೂ ಹುಟ್ಟು ಯೆಹೂದ್ಯರು, ಪಾಪಿಗಳೆನಿಸಿಕೊಂಡ ಅನ್ಯಜನರಲ್ಲ;

16 ಆದರೂ ಯಾವನಾದರೂ ಯೇಸು ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ಹೊರತು ನೇಮನಿಷ್ಠೆಗಳನ್ನನುಸರಿಸಿ ನೀತಿವಂತನೆಂದು ನಿರ್ಣಯಿಸಲ್ಪಡುವದಿಲ್ಲವೆಂಬದು ನಮಗೆ ತಿಳಿದಿರುವದರಿಂದ ನಾವು ಸಹ ನೇಮನಿಷ್ಠೆಗಳನ್ನು ಬಿಟ್ಟು ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ನೀತಿವಂತರೆಂದು ನಿರ್ಣಯಿಸಲ್ಪಡುವದಕ್ಕಾಗಿ ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಟ್ಟೆವು; ಯಾಕಂದರೆ ಯಾವನಾದರೂ ನೇಮನಿಷ್ಠೆಗಳನ್ನನುಸರಿಸಿ ನೀತಿವಂತನೆಂದು ನಿರ್ಣಯಿಸಲ್ಪಡುವದಿಲ್ಲ.

17 ಆದರೆ ನಾವು ಕ್ರಿಸ್ತನ ಆಶ್ರಯದಲ್ಲಿ ನೀತಿವಂತರೆಂಬ ನಿರ್ಣಯ ಹೊಂದುವದಕ್ಕೆ ಪ್ರಯತ್ನಿಸುತ್ತಿರುವಾಗ ನಾವೂ ಪಾಪಿಗಳಾಗಿ ತೋರಿಬಂದರೆ ಕ್ರಿಸ್ತನು ಪಾಪಕ್ಕೆ ಸಹಾಯಕನೆಂದು ಹೇಳಬೇಕೇನು? ಎಂದಿಗೂ ಹೇಳಬಾರದು.

18 ನಾನು ಕೆಡವಿದ್ದನ್ನೇ ತಿರಿಗಿ ಕಟ್ಟಿದರೆ ನನ್ನನ್ನು ನಾನೇ ಅಪರಾಧಿ ಎಂದು ತೋರಿಸಿಕೊಳ್ಳುತ್ತೇನಲ್ಲಾ.

19 ನಾನಂತೂ ದೇವರಿಗಾಗಿ ಜೀವಿಸುವದಕ್ಕೋಸ್ಕರ ಧರ್ಮಪ್ರಮಾಣದ ಮೂಲಕವಾಗಿ ಧರ್ಮಪ್ರಮಾಣದ ಪಾಲಿಗೆ ಸತ್ತೆನು.

20 ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ; ಈಗ ಶರೀರದಲ್ಲಿರುವ ನಾನು ಜೀವಿಸುವದು ಹೇಗಂದರೆ ದೇವಕುಮಾರನ ಮೇಲಣ ನಂಬಿಕೆಯಲ್ಲಿಯೇ. ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು.

21 ನಾನು ದೇವರ ಕೃಪೆಯನ್ನು ನಿರರ್ಥಕ ಮಾಡುವದಿಲ್ಲ. ಕರ್ಮಮಾರ್ಗದಿಂದ ನೀತಿಯುಂಟಾಗುವದಾದರೆ ಕ್ರಿಸ್ತನು ಮರಣವನ್ನು ಹೊಂದಿದ್ದಕ್ಕೆ ಕಾರಣವೇ ಇಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು