ಕೊಲೊಸ್ಸೆಯವರಿಗೆ 4 - ಕನ್ನಡ ಸತ್ಯವೇದವು J.V. (BSI)1 ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನೊಬ್ಬನಿದ್ದಾನೆಂದು ತಿಳಿದು ನಿಮ್ಮ ದಾಸರಿಗೆ ನ್ಯಾಯವಾದದ್ದನ್ನೂ ಸರಿಯಾದದ್ದನ್ನೂ ಮಾಡಿರಿ. 2 ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ ಅದರಲ್ಲಿ ಎಚ್ಚರವಾಗಿದ್ದು ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ. 3-4 ಇದಲ್ಲದೆ ನಮಗೋಸ್ಕರವೂ ಪ್ರಾರ್ಥನೆ ಮಾಡಿರಿ. ಕ್ರಿಸ್ತನ ವಿಷಯದಲ್ಲಿ ದೇವರು ತಿಳಿಯಪಡಿಸಿದ ಸತ್ಯಾರ್ಥವನ್ನು ಪ್ರಸಂಗಿಸುವದಕ್ಕೆ ಆತನು ಅನುಕೂಲವಾದ ಸಂದರ್ಭವನ್ನು ನಮಗೆ ದಯಪಾಲಿಸಿ ನಾನು ಅದನ್ನು ಹೇಳಬೇಕಾದ ರೀತಿಯಲ್ಲಿ ತಿಳಿಸುವಂತೆ ಅನುಗ್ರಹಮಾಡಬೇಕೆಂದು ಬೇಡಿಕೊಳ್ಳಿರಿ; ಆ ಸತ್ಯಾರ್ಥದ ನಿವಿುತ್ತವೇ ನಾನು ಸೆರೆಯಲ್ಲಿದ್ದೇನಲ್ಲಾ. 5 ಸಮಯವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ. 6 ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳಿದುಕೊಳ್ಳುವಿರಿ. ವಂದನೆಗಳೂ ಕಡೇ ಮಾತುಗಳೂ 7 ಪ್ರಿಯ ಸಹೋದರನೂ ನಂಬಿಗಸ್ತನಾದ ಸೇವಕನೂ ಕರ್ತನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ಸಂಗತಿಗಳನ್ನೆಲ್ಲಾ ನಿಮಗೆ ತಿಳಿಸುವನು. 8 ನೀವು ನನ್ನ ಸಮಾಚಾರವನ್ನು ತಿಳುಕೊಳ್ಳುವ ಹಾಗೆಯೂ ಅವನು ನಿಮ್ಮ ಹೃದಯಗಳನ್ನು ಸಂತೈಸುವ ಹಾಗೆಯೂ 9 ಅವನನ್ನು ನಂಬಿಗಸ್ತನಾದ ಪ್ರಿಯ ಸಹೋದರನಾಗಿರುವ ನಿಮ್ಮ ಊರಿನ ಒನೇಸಿಮನ ಜೊತೆಯಲ್ಲಿ ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುವ ಸಂಗತಿಗಳನ್ನೆಲ್ಲಾ ನಿಮಗೆ ತಿಳಿಸುವರು. 10 ನನ್ನ ಜೊತೆಸೆರೆಯವನಾದ ಅರಿಸ್ತಾರ್ಕನೂ ಬಾರ್ನಬನಿಗೆ ದಾಯಾದನಾಗಿರುವ ಮಾರ್ಕನೂ ನಿಮಗೆ ವಂದನೆ ಹೇಳುತ್ತಾರೆ. ಮಾರ್ಕನನ್ನು ಕುರಿತು ಅಪ್ಪಣೆಗಳನ್ನು ಹೊಂದಿದಿರಲ್ಲಾ; ಅವನು ನಿಮ್ಮ ಬಳಿಗೆ ಬಂದರೆ ಅವನನ್ನು ಸೇರಿಸಿಕೊಳ್ಳಿರಿ. 11 ಯೂಸ್ತನೆನಿಸಿಕೊಳ್ಳುವ ಯೇಸು ಸಹ ನಿಮಗೆ ವಂದನೆ ಹೇಳುತ್ತಾನೆ. ಸುನ್ನತಿಯವರೊಳಗೆ ಇವರು ಮಾತ್ರವೇ ದೇವರ ರಾಜ್ಯಾಭಿವೃದ್ಧಿಗಾಗಿ ನನ್ನ ಜೊತೆಗೆಲಸದವರಾಗಿದ್ದಾರೆ; ಇವರಿಂದ ನನಗೆ ಉಪಶಮನ ಉಂಟಾಯಿತು. 12 ಕ್ರಿಸ್ತ ಯೇಸುವಿನ ದಾಸನಾಗಿರುವ ನಿಮ್ಮ ಊರಿನ ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ; ಇವನು ಪ್ರಾರ್ಥನೆ ಮಾಡುವಾಗೆಲ್ಲಾ ನಿಮಗೋಸ್ಕರ ಹೋರಾಡಿ ನೀವು ಪ್ರವೀಣರಾಗಿಯೂ ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತವನ್ನು ಕುರಿತು ಪೂರ್ಣ ನಿಶ್ಚಯವುಳ್ಳವರಾಗಿಯೂ ನಿಂತಿರಬೇಕೆಂದು ವಿಜ್ಞಾಪನೆ ಮಾಡುತ್ತಾನೆ. 13 ಇವನು ನಿಮಗೋಸ್ಕರವೂ ಲವೊದಿಕೀಯದವರಿಗೋಸ್ಕರವೂ ಹಿರಿಯಾಪೊಲಿಯವರಿಗೋಸ್ಕರವೂ ಬಹಳ ಪ್ರಯಾಸ ಪಡುತ್ತಾನೆಂದು ಸಾಕ್ಷಿ ಹೇಳುತ್ತೇನೆ. 14 ಪ್ರಿಯ ವೈದ್ಯನಾಗಿರುವ ಲೂಕನು ಮತ್ತು ದೇಮನು ನಿಮಗೆ ವಂದನೆ ಹೇಳುತ್ತಾರೆ. 15 ಲವೊದಿಕೀಯದಲ್ಲಿರುವ ಸಹೋದರರಿಗೂ ನುಂಫಳಿಗೂ ಆಕೆಯ ಮನೆಯಲ್ಲಿ ಕೂಡುವ ಸಭೆಯವರಿಗೂ ವಂದನೆ ಹೇಳಿರಿ. 16 ನಿಮ್ಮಲ್ಲಿ ಈ ಪತ್ರಿಕೆಯನ್ನು ಓದಿಸಿಕೊಂಡ ತರುವಾಯ ಲವೊದಿಕೀಯದವರ ಸಭೆಯಲ್ಲಿಯೂ ಓದಿಸಿರಿ; ಮತ್ತು ನಾನು ಬರೆದ ಪತ್ರಿಕೆಯನ್ನು ಲವೊದಿಕೀಯದಿಂದ ತರಿಸಿ ನೀವೂ ಓದಿಕೊಳ್ಳಿರಿ. 17 ಅರ್ಖಿಪ್ಪನಿಗೆ - ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರಬೇಕೆಂದು ಹೇಳಿರಿ. 18 ಇದು ಪೌಲನೆಂಬ ನಾನು ಸ್ವಂತ ಕೈಯಿಂದ ಬರೆದ ವಂದನೆ. ನಾನು ಸೆರೆಯಲ್ಲಿದ್ದೇನೆಂಬದನ್ನು ಜ್ಞಾಪಕ ಮಾಡಿಕೊಳ್ಳಿರಿ. ಕೃಪೆಯು ನಿಮ್ಮೊಂದಿಗಿರಲಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India