Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೊಲೊಸ್ಸೆಯವರಿಗೆ 3 - ಕನ್ನಡ ಸತ್ಯವೇದವು J.V. (BSI)


ಅಜ್ಞಾನಿಗಳ ದುರ್ನಡತೆಯನ್ನು ಬಿಟ್ಟುಬಿಟ್ಟು ಯೋಗ್ಯರಾಗಿ ನಡೆಯಬೇಕೆಂಬ ಬೋಧೆ
( ಎಫೆಸ. 4.17—6.9 )

1 ಆದಕಾರಣ ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವದರಿಂದ ಮೇಲಿರುವವುಗಳನ್ನು ಹುಡುಕಿರಿ; ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.

2 ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ.

3 ಯಾಕಂದರೆ ನೀವು ಸತ್ತಿರಲ್ಲಾ, ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿಟ್ಟದೆ.

4 ನಮಗೆ ಜೀವವಾಗಿರುವ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನೀವು ಸಹ ಆತನ ಜೊತೆಯಲ್ಲಿ ಪ್ರಭಾವದಿಂದ ಕೂಡಿದವರಾಗಿ ಪ್ರತ್ಯಕ್ಷರಾಗುವಿರಿ.

5 ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ;

6 ಇವುಗಳ ನಿವಿುತ್ತ ದೇವರ ಕೋಪವು ಉಂಟಾಗುತ್ತದೆ.

7 ಪೂರ್ವದಲ್ಲಿ ನೀವು ಸಹ ಈ ದುರ್ಭಾವಗಳ ಅಧೀನದಲ್ಲಿದ್ದು ಈ ಕೆಲಸಗಳನ್ನು ನಡಿಸುತ್ತಿದ್ದಿರಿ.

8 ಈಗಲಾದರೋ ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ.

9 ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ; ನೀವು ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೇ.

10 ಈ ಸ್ವಭಾವವು ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುತ್ತದೆ.

11 ಇದನ್ನು ಧರಿಸಿಕೊಂಡಿರುವದರಲ್ಲಿ ಗ್ರೀಕನು ಯೆಹೂದ್ಯನು ಎಂಬ ಭೇದವಿಲ್ಲ; ಸುನ್ನತಿ ಮಾಡಿಸಿಕೊಂಡವರು ಸುನ್ನತಿಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ; ಮ್ಲೇಚ್ಫ ಹೂಣ ಎಂಬ ಹೆಸರುಗಳಿಲ್ಲ; ಆಳು ಒಡೆಯ ಎಂಬ ಭೇದವಿಲ್ಲ. ಆದರೆ ಕ್ರಿಸ್ತನೇ ಸಮಸ್ತರಲ್ಲಿಯೂ ಸಮಸ್ತವೂ ಆಗಿರುವನು.

12 ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.

13 ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷವಿುಸಿರಿ. ಕರ್ತನು ನಿಮ್ಮನ್ನು ಕ್ಷವಿುಸಿದಂತೆಯೇ ನೀವೂ ಕ್ಷವಿುಸಿರಿ.

14 ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ. ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.

15 ಕ್ರಿಸ್ತನಿಂದಾದ ಸಮಾಧಾನವು ನಿಮ್ಮ ಹೃದಯಗಳಲ್ಲಿ ಯಜಮಾನನಂತಿದ್ದು ತೀರ್ಪುಹೇಳಲಿ; ನೀವು ಒಂದೇ ದೇಹಕ್ಕೆ ಸೇರಿದವರಾದದರಿಂದ ಸಮಾಧಾನದಿಂದಿರುವದಕ್ಕಾಗಿ ಕರೆಯಲ್ಪಟ್ಟಿರಿ. ಇದಲ್ಲದೆ ಕೃತಜ್ಞತೆಯುಳ್ಳವರಾಗಿರ್ರಿ.

16 ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ; ಸಕಲಜ್ಞಾನದಿಂದ ಕೂಡಿದವರಾಗಿ ಒಬ್ಬರಿಗೊಬ್ಬರು ಉಪದೇಶಮಾಡಿಕೊಳ್ಳಿರಿ, ಬುದ್ಧಿಹೇಳಿಕೊಳ್ಳಿರಿ; ಕರ್ತನ ಕೃಪೆಯನ್ನು ನೆನಸಿಕೊಳ್ಳುವವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಸಂಬಂಧವಾದ ಹಾಡುಗಳಿಂದಲೂ ನಿಮ್ಮ ಹೃದಯಗಳಲ್ಲಿ ದೇವರಿಗೆ ಗಾನಮಾಡಿರಿ.

17 ನೀವು ನುಡಿಯಿಂದಾಗಲಿ ನಡೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.

18 ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಇದು ಕರ್ತನಲ್ಲಿರುವವರಿಗೆ ಯೋಗ್ಯವಾಗಿದೆ.

19 ಪುರುಷರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರಿಗೆ ನಿಷ್ಠುರವಾಗಿರಬೇಡಿರಿ.

20 ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಿರಿ;

21 ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ. ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.

22 ದಾಸತ್ವದಲ್ಲಿರುವವರೇ, ಈ ಲೋಕದಲ್ಲಿನ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿರಿ; ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆ ಮಾಡದೆ ಕರ್ತನಿಗೆ ಭಯಪಡುವವರಾಗಿ ಸರಳಮನಸ್ಸಿನಿಂದ ಕೆಲಸಮಾಡಿರಿ.

23 ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ;

24 ಕರ್ತನಿಂದ ಪರಲೋಕ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವೆವೆಂದು ತಿಳಿದಿದ್ದೀರಲ್ಲಾ. ನೀವು ಕರ್ತನಾದ ಕ್ರಿಸ್ತನಿಗೇ ದಾಸರಾಗಿದ್ದೀರಿ.

25 ಅನ್ಯಾಯಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವನಷ್ಟೆ; ಪಕ್ಷಪಾತವಿರುವದಿಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು