Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 91 - ಕನ್ನಡ ಸತ್ಯವೇದವು J.V. (BSI)


ದೇವಾಶ್ರಿತನು ಸುರಕ್ಷಿತನಾಗಿರುವನು
( ವಿಮೋ. 23.20-26 )

1 ಪರಾತ್ಪರನ ಮರೆಹೊಕ್ಕಿರುವವನು ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು.

2 ನಾನು ಯೆಹೋವನಿಗೆ - ನೀನೇ ನನ್ನ ಶರಣನು ನನ್ನ ದುರ್ಗವು ನಾನು ಭರವಸವಿಟ್ಟಿರುವ ನನ್ನ ದೇವರು ಎಂದು ಹೇಳುವೆನು.

3 ನಿನ್ನನ್ನು ಬೇಟೆಗಾರನ ಬಲೆಯಿಂದಲೂ ಮರಣಕರವ್ಯಾಧಿಯಿಂದಲೂ ತಪ್ಪಿಸುವವನು ಆತನೇ.

4 ಆತನು ನಿನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸುವನು; ಆತನ ಪಕ್ಕಗಳ ಮರೆಯನ್ನು ಆಶ್ರಯಿಸಿಕೊಳ್ಳುವಿ. ಆತನ ಸತ್ಯತೆಯೇ ನಿನಗೆ ಖೇಡ್ಯವೂ ಗುರಾಣಿಯೂ ಆಗಿದೆ.

5 ಇರುಳಲ್ಲಿ ಭಯಹುಟ್ಟಿಸುವ ಯಾವದಕ್ಕೂ ಹಗಲಲ್ಲಿ ಹಾರಿಬರುವ ಬಾಣಕ್ಕೂ

6 ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ ಹಾನಿಕರವಾದ ಮಧ್ಯಾಹ್ನದ ಕೇಡಿಗೂ ಅಂಜ ಕಾರಣವಿಲ್ಲ.

7 ನಿನ್ನ ಮಗ್ಗುಲಲ್ಲಿ ಸಾವಿರ ಜನರು, ನಿನ್ನ ಬಲಗಡೆಯಲ್ಲಿ ಹತ್ತುಸಾವಿರ ಜನರು ಸತ್ತುಬಿದ್ದರೂ ನಿನಗೇನೂ ತಟ್ಟದು.

8 ನೀನು ಅದನ್ನು ಕಣ್ಣಾರೆ ಕಂಡು ದುಷ್ಟರಿಗೆ ಪ್ರತಿದಂಡನೆಯುಂಟೆಂಬದಕ್ಕೆ ಸಾಕ್ಷಿಯಾಗಿರುವಿಯಷ್ಟೆ.

9 ಯೆಹೋವನೇ ನನ್ನ ಶರಣನು! ಪರಾತ್ಪರನನ್ನು ನಿವಾಸಸ್ಥಾನ ಮಾಡಿಕೊಂಡಿದ್ದೀಯಲ್ಲಾ.

10 ಯಾವ ಕೇಡೂ ನಿನಗೆ ಸಂಭವಿಸದು; ಉಪದ್ರವವು ನಿನ್ನ ಗುಡಾರದ ಸಮೀಪಕ್ಕೂ ಬಾರದು.

11 ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಯುವದಕ್ಕೆ ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು.

12 ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.

13 ಸಿಂಹಸರ್ಪಗಳ ಮೇಲೆ ನಡೆಯುವಿ; ಪ್ರಾಯದ ಸಿಂಹವನ್ನೂ ಘಟಸರ್ಪವನ್ನೂ ತುಳಿದು ಬಿಡುವಿ.

14 ಅವನು ನನ್ನಲ್ಲಿ ಆಸಕ್ತನಾಗಿರುವದರಿಂದ ಅವನನ್ನು ರಕ್ಷಿಸುವೆನು; ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು.

15 ಅವನು ನನಗೆ ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು; ಇಕ್ಕಟ್ಟಿನಲ್ಲಿ ಹತ್ತಿರವಿದ್ದು ಅವನನ್ನು ತಪ್ಪಿಸಿ ಘನಪಡಿಸುವೆನು;

16 ದೀರ್ಘಾಯುಷ್ಯವನ್ನು ಅನುಗ್ರಹಿಸಿ ಅವನನ್ನು ತೃಪ್ತಿಪಡಿಸುವೆನು; ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು