ಕೀರ್ತನೆಗಳು 88 - ಕನ್ನಡ ಸತ್ಯವೇದವು J.V. (BSI)ದುಃಖದಲ್ಲಿ ಮುಳುಗಿರುವವನ ಮೊರೆ ಹಾಡು; ಕೋರಹೀಯರ ಕೀರ್ತನೆ; ಪ್ರಧಾನ ಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಮಹಲಾತ್ ಎಂಬ ರಾಗದ ಪ್ರಕಾರ ಹಾಡತಕ್ಕದ್ದು; ಜೇರಹಕುಲದವನಾದ ಹೇಮಾನನ ಪದ್ಯ ( ಪ್ರಲಾ. 3 ) 1 ಯೆಹೋವನೇ, ನನ್ನನ್ನು ರಕ್ಷಿಸುವ ದೇವರೇ, ಹಗಲಿರುಳು ನಿನಗೆ ಮೊರೆಯಿಡುತ್ತೇನೆ. 2 ನನ್ನ ಪ್ರಾರ್ಥನೆಯು ನಿನ್ನ ಸನ್ನಿಧಿಯನ್ನು ಮುಟ್ಟಲಿ; ಕಿವಿಗೊಟ್ಟು ನನ್ನ ಕೂಗನ್ನು ಕೇಳು. 3 ನನ್ನ ಜೀವವು ಕಷ್ಟಗಳಿಂದ ತುಂಬಿಹೋಯಿತು; ನನ್ನ ಪ್ರಾಣವು ಪಾತಾಳಕ್ಕೆ ಹತ್ತಿರವಾಯಿತು. 4 ಸಮಾಧಿಯಲ್ಲಿ ಸೇರುವವರೊಳಗೆ ಎಣಿಸಲ್ಪಟ್ಟಿದ್ದೇನೆ; ಗತಿಗೆಟ್ಟ ಮನುಷ್ಯನಂತಿದ್ದೇನೆ. 5 ಸತ್ತವನ ಹಾಗೆ ನನ್ನನ್ನು ಹೊರಗೆ ಹಾಕಿದ್ದಾರೆ; ಸಮಾಧಿಯಲ್ಲಿ ಬಿದ್ದಿರುವ ಹತರಂತಿದ್ದೇನೆ. ಅವರು ನಿನ್ನ ಪರಿಪಾಲನೆಗೆ ಹೊರಗಾದವರು; ಅಂಥವರನ್ನು ನೀನು ಜ್ಞಾಪಿಸುವದೇ ಇಲ್ಲ. 6 ಅಧೋಲೋಕದಲ್ಲಿಯೂ ಗಾಡಾಂಧಕಾರದಲ್ಲಿಯೂ ಅಗಾಧಸ್ಥಳದಲ್ಲಿಯೂ ನನ್ನನ್ನು ದೊಬ್ಬಿಬಿಟ್ಟಿದ್ದೀ. 7 ನಿನ್ನ ಕೋಪಭಾರವು ನನ್ನನ್ನು ಕುಗ್ಗಿಸಿಬಿಟ್ಟಿದೆ; ನಿನ್ನ ಎಲ್ಲಾ ತೆರೆಗಳಿಂದ ನನ್ನನ್ನು ಬಾಧಿಸಿದ್ದೀ. ಸೆಲಾ. 8 ನನ್ನ ಆಪ್ತರು ನನ್ನನ್ನು ಹೇಸಿ ಬಿಟ್ಟುಹೋಗುವಂತೆ ಮಾಡಿದ್ದೀ; ಕಟ್ಟಲ್ಪಟ್ಟಿದ್ದೇನೆ, ಬಿಡಿಸಿಕೊಳ್ಳಲಾರೆ. 9 ಬಾಧೆಯಿಂದ ನನ್ನ ಕಣ್ಣುಗಳು ಮೊಬ್ಬಾಗಿ ಹೋಗಿವೆ. ಯೆಹೋವನೇ, ಹಗಲೆಲ್ಲಾ ಕೈಯೊಡ್ಡಿ ನಿನಗೆ ಮೊರೆಯಿಡುತ್ತೇನೆ. 10 ನೀನು ಸತ್ತವರಿಗೆ ಅದ್ಭುತಕಾರ್ಯಗಳನ್ನು ತೋರಿಸುವಿಯೋ? ಪ್ರೇತಗಳು ಎದ್ದು ನಿನ್ನನ್ನು ಕೊಂಡಾಡುವವೋ? ಸೆಲಾ. 11 ಸಮಾಧಿಯಲ್ಲಿ ನಿನ್ನ ಕೃಪೆಯನ್ನೂ ನಾಶಲೋಕದಲ್ಲಿ ನಿನ್ನ ಸತ್ಯತೆಯನ್ನೂ ಸಾರುವದುಂಟೋ? 12 ಕತ್ತಲೆಯ ಲೋಕದಲ್ಲಿ ನಿನ್ನ ಮಹತ್ಕಾರ್ಯಗಳೂ ಮರವೆಯ ದೇಶದಲ್ಲಿ ನಿನ್ನ ನೀತಿಯೂ ತಿಳಿಯಲ್ಪಡುವವೋ? 13 ನಾನಾದರೋ, ಯೆಹೋವನೇ, ನಿನಗೆ ಮೊರೆಯಿಡುತ್ತೇನೆ; ಉದಯದಲ್ಲಿ ನನ್ನ ವಿಜ್ಞಾಪನೆಯು ನಿನ್ನ ಮುಂದೆ ಬರುವದು. 14 ಯೆಹೋವನೇ, ನನ್ನ ಪ್ರಾಣವನ್ನೇಕೆ ತಳ್ಳಿಬಿಟ್ಟಿ? ನಿನ್ನ ಮುಖವನ್ನು ಮರೆಮಾಡಿದ್ದೇಕೆ? 15 ಯೌವನಾರಭ್ಯ ಕುಗ್ಗಿದವನೂ ಮೃತಪ್ರಾಯನೂ ನಿನ್ನ ಗದರಿಕೆಯಿಂದ ದೆಸೆಗೆಟ್ಟವನೂ ಆಗಿದ್ದೇನಲ್ಲಾ. 16 ನಿನ್ನ ಕೋಪಜ್ವಾಲೆಯು ನನ್ನನ್ನು ಕವಿದದೆ. ನಿನ್ನಿಂದುಂಟಾದ ದಿಗಿಲಿನಿಂದ ಹಾಳಾದೆನು. 17 ಅವು ದಿನವೆಲ್ಲಾ ನೀರಿನಂತೆ ನನ್ನನ್ನು ಆವರಿಸಿಕೊಂಡವೆ; ಒಟ್ಟುಗೂಡಿ ನನ್ನನ್ನು ಸುತ್ತಿಬಿಟ್ಟಿವೆ. 18 ನನ್ನ ಆಪ್ತವಿುತ್ರರನ್ನು ದೂರಮಾಡಿದಿ; ಅಂಧಕಾರವೇ ನನ್ನ ಪರಿಚಯವು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India