Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 86 - ಕನ್ನಡ ಸತ್ಯವೇದವು J.V. (BSI)


ಶತ್ರುಪೀಡಿತನ ವಿಜ್ಞಾಪನೆ ದಾವೀದನ ಪ್ರಾರ್ಥನೆ
( ಕೀರ್ತ. 25 )

1 ಯೆಹೋವನೇ, ಕಿವಿಗೊಡು; ನನಗೆ ಸದುತ್ತರವನ್ನು ದಯಪಾಲಿಸು; ಕುಗ್ಗಿದವನೂ ದಿಕ್ಕಿಲ್ಲದವನೂ ಆಗಿದ್ದೇನೆ.

2 ನಾನು ನಿನ್ನ ಭಕ್ತನು; ನನ್ನ ಪ್ರಾಣವನ್ನು ಉಳಿಸು; ನೀನೇ ನನ್ನ ದೇವರು; ನಿನ್ನಲ್ಲಿ ಭರವಸವಿಟ್ಟಿರುವ ನಿನ್ನ ಸೇವಕನನ್ನು ರಕ್ಷಿಸು.

3 ಕರ್ತನೇ, ಕರುಣಿಸು; ದಿನವೆಲ್ಲಾ ನಿನಗೆ ಮೊರೆಯಿಡುತ್ತೇನೆ.

4 ಕರ್ತನೇ, ನಿನ್ನ ಸೇವಕನ ಹೃದಯವನ್ನು ಆನಂದಗೊಳಿಸು; ನಿನ್ನನ್ನೇ ನಿರೀಕ್ಷಿಸುತ್ತಿರುವೆನಲ್ಲಾ.

5 ಕರ್ತನೇ, ನೀನು ಒಳ್ಳೆಯವನೂ ಕ್ಷವಿುಸುವವನೂ ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದೀಯಲ್ಲಾ.

6 ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗಳ ಶಬ್ದವನ್ನು ಲಾಲಿಸು.

7 ನೀನು ಸದುತ್ತರವನ್ನು ದಯಪಾಲಿಸುವಿಯೆಂದು ನಂಬಿ ನನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನನ್ನೇ ಕರೆಯುವೆನು.

8 ಕರ್ತನೇ, ದೇವರುಗಳಲ್ಲಿ ನಿನಗೆ ಸಮಾನನೇ ಇಲ್ಲ; ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ.

9 ಕರ್ತನೇ, ನಿನ್ನಿಂದುಂಟಾದ ಎಲ್ಲಾ ಜನಾಂಗಗಳು ಬಂದು ನಿನಗೆ ಅಡ್ಡಬಿದ್ದು ನಿನ್ನ ನಾಮವನ್ನು ಘನಪಡಿಸುವವು.

10 ಮಹೋನ್ನತನೂ ಮಹತ್ಕಾರ್ಯಗಳನ್ನು ನಡಿಸುವವನೂ ನೀನು; ದೇವರು ನೀನೊಬ್ಬನೇ.

11 ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು. ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು.

12 ಕರ್ತನೇ, ನನ್ನ ದೇವರೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು; ಎಂದೆಂದಿಗೂ ನಿನ್ನ ನಾಮವನ್ನು ಘನಪಡಿಸುವೆನು.

13 ನೀನು ಬಹಳವಾಗಿ ಕನಿಕರಿಸಿ ನನ್ನ ಪ್ರಾಣವನ್ನು ಪಾತಾಳತಲದಿಂದ ತಪ್ಪಿಸಿದ್ದೀಯಲ್ಲಾ.

14 ದೇವರೇ, ಗರ್ವಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ; ಬಲಾತ್ಕಾರಿಗಳ ಗುಂಪು ನನ್ನ ಪ್ರಾಣಕ್ಕೆ ಕಾದಿದೆ. ಅವರು ನಿನ್ನನ್ನು ಲಕ್ಷಿಸುವದಿಲ್ಲ.

15 ಕರ್ತನೇ, ನೀನು ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನು, ಬಹಳ ಪ್ರೀತಿಯೂ ನಂಬಿಕೆಯೂ ಉಳ್ಳವನು.

16 ಕಟಾಕ್ಷವಿಟ್ಟು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ಬಲವನ್ನು ಅನುಗ್ರಹಿಸು; ನಿನ್ನ ಸೇವಕಳ ಮಗನನ್ನು ರಕ್ಷಿಸು.

17 ನನಗಾಗಿ ಒಂದು ಶುಭಸೂಚನೆಯನ್ನು ತೋರಿಸು; ನನ್ನ ಹಗೆಗಾರರು ನೋಡಿ - ಯೆಹೋವನು ನೆರವಾಗಿ ಇವನನ್ನು ಸಂತೈಸಿದ್ದಾನೆಂದು ನಾಚಿಕೆಪಡಲಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು