ಕೀರ್ತನೆಗಳು 83 - ಕನ್ನಡ ಸತ್ಯವೇದವು J.V. (BSI)ದೇವಪ್ರಜಾವಿರುದ್ಧವಾಗಿ ಒಳಸಂಚು ಮಾಡಿದ ಜನಾಂಗಗಳನ್ನು ಆಕ್ರೋಶಿಸುವದು ಆಸಾಫನ ಕೀರ್ತನೆ; ಗೀತ 1 ದೇವರೇ, ಸುಮ್ಮನಿರಬೇಡ; ನಿಶ್ಚಿಂತನಾಗಿ ಮೌನದಿಂದಿರಬೇಡ ಸ್ವಾಮೀ. 2 ನೋಡು, ನಿನ್ನ ಶತ್ರುಗಳು ಘೋಷಿಸುತ್ತಾರೆ; ನಿನ್ನ ದ್ವೇಷಿಗಳು ತಲೆಯೆತ್ತಿದ್ದಾರೆ. 3 ಅವರು ನಿನ್ನ ಪ್ರಜೆಗಳಿಗೆ ವಿರೋಧವಾಗಿ ಒಳಸಂಚು ಮಾಡಿ ನಿನ್ನ ಮರೆಹೊಕ್ಕವರನ್ನು ಕೆಡಿಸಬೇಕೆಂದು ಆಲೋಚಿಸಿ - 4 ಬನ್ನಿರಿ; ಅವರು ಜನಾಂಗವಾಗಿ ಉಳಿಯದಂತೆಯೂ ಇಸ್ರಾಯೇಲೆಂಬ ಹೆಸರು ಅಳಿದುಹೋಗುವಂತೆಯೂ ಅವರನ್ನು ಸಂಹರಿಸೋಣ ಅಂದುಕೊಳ್ಳುತ್ತಾರೆ. 5 ಎದೋಮ್ಯರ ಮತ್ತು ಇಷ್ಮಾಯೇಲ್ಯರ ಪಾಳೆಯಗಳವರು, ಮೋವಾಬ್ಯರು, ಹಗ್ರೀಯರು, 6 ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, ಫಿಲಿಷ್ಟಿಯರು, ತೂರ್ ಸಂಸ್ಥಾನದವರು, 7 ಇವರೆಲ್ಲಾ ಏಕಮನಸ್ಸಿನಿಂದ ಕೂಡಿ ನಿನಗೇ ವಿರೋಧವಾಗಿ ಒಳಸಂಚು ಮಾಡುತ್ತಾರಲ್ಲಾ; 8 ಅಶ್ಯೂರ್ಯರೂ ಇವರೊಡನೆ ಕೂಡಿಕೊಂಡು ಲೋಟನ ವಂಶದವರಿಗೆ ಭುಜವಾಗಿದ್ದಾರೆ. ಸೆಲಾ. 9 ನೀನು ವಿುದ್ಯಾನ್ಯರನ್ನು ಸಂಹರಿಸಿದಂತೆ ಇವರನ್ನೂ ಸಂಹರಿಸು. ಕೀಷೋನ್‍ಹಳ್ಳದ ಬಳಿಯಲ್ಲಿ ಸೀಸೆರ ಯಾಬೀನ್ ಎಂಬವರಿಗೆ ಮಾಡಿದಂತೆ ಇವರಿಗೂ ಮಾಡು. 10 ಅವರು ಎಂದೋರಿನಲ್ಲಿ ವಧಿಸಲ್ಪಟ್ಟು ಹೊಲದ ಗೊಬ್ಬರವಾಗಿಹೋದರಲ್ಲಾ. 11 ಓರೇಬ್ ಜೇಬ್ ಎಂಬವರ ಗತಿಯು ಇವರ ಶ್ರೀಮಂತರಿಗೂ ಸಂಭವಿಸಲಿ; ಜೇಬಹ ಚಲ್ಮುನ್ನ ಎಂಬವರ ಹಾಗೆ ಇವರ ಪ್ರಭುಗಳಿಗೂ ಆಗಲಿ. 12 ದೇವರು ಅವರಿಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುವಾ ಅಂದುಕೊಳ್ಳುತ್ತಾರಲ್ಲಾ. 13 ನನ್ನ ದೇವರೇ, ಅವರನ್ನು ಗಾಳಿಯಲ್ಲಿ ಸುತ್ತಿಯಾಡುವ ಧೂಳಿನಂತೆಯೂ ಹಾರಿಹೋಗುವ ಹೊಟ್ಟಿನಂತೆಯೂ ಮಾಡು. 14 ನೀನು ಕಾಡನ್ನು ಸುಟ್ಟುಬಿಡುವ ಬೆಂಕಿಯಂತೆಯೂ ಪರ್ವತಗಳನ್ನು ದಹಿಸಿಬಿಡುವ ಜ್ವಾಲೆಯಂತೆಯೂ ಇದ್ದು 15 ನಿನ್ನ ಸುಂಟರಗಾಳಿಯಿಂದ ಅವರನ್ನು ಬೆನ್ನಟ್ಟು; ತುಫಾನಿನಿಂದ ಅವರನ್ನು ಕಳವಳಗೊಳಿಸು. 16 ನಾಚಿಕೆಯು ಅವರ ಮುಖವನ್ನು ಕವಿಯಲಿ. ಯೆಹೋವನೇ, ಆಗ ಅವರು ನಿನ್ನ ಹೆಸರನ್ನು ಕೇಳಿಕೊಂಡು ಬಂದಾರು. 17 ಅವರು ನಿರಂತರವೂ ಆಶಾಭಂಗದಿಂದ ಕಳವಳಗೊಳ್ಳಲಿ; ಅಪಮಾನದಿಂದ ನಾಶವಾಗಲಿ. 18 ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India