Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 79 - ಕನ್ನಡ ಸತ್ಯವೇದವು J.V. (BSI)


ದೇವಪ್ರಜೆಯನ್ನು ಸಂಹರಿಸಿದ ಮ್ಲೇಚ್ಫರಿಗೆ ದಂಡನೆಯಾಗಬೇಕೆಂಬ ಪ್ರಾರ್ಥನೆ ಆಸಾಫನ ಕೀರ್ತನೆ
( ಕೀರ್ತ. 74 )

1 ದೇವರೇ, ಮ್ಲೇಚ್ಫರು ನಿನ್ನ ಸ್ವಾಸ್ತ್ಯವನ್ನು ಹೊಕ್ಕು ನಿನ್ನ ಪರಿಶುದ್ಧಾಲಯವನ್ನು ಹೊಲೆಮಾಡಿದರು; ಯೆರೂಸಲೇಮ್ ಪಟ್ಟಣವನ್ನು ಹಾಳು ದಿಬ್ಬಗಳಾಗಿ ಮಾಡಿಬಿಟ್ಟರು.

2 ಅವರು ನಿನ್ನ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೆ ಆಹಾರಮಾಡಿದರು; ನಿನ್ನ ಭಕ್ತರ ದೇಹಮಾಂಸವನ್ನು ಕಾಡುಮೃಗಗಳಿಗೆ ಹಾಕಿದರು.

3 ಯೆರೂಸಲೇವಿುನ ಸುತ್ತಲೂ ಅವರ ರಕ್ತವನ್ನು ನೀರಿನ ಹಾಗೆ ಚೆಲ್ಲಿದರು; ಅವರನ್ನು ಹೂಣಿಡುವವರು ಯಾರೂ ಇರಲಿಲ್ಲ.

4 ನಾವು ನಮ್ಮ ನೆರೆಹೊರೆಯ ಜನಾಂಗಗಳಿಗೆ ನಿಂದಾಸ್ಪದರಾದೆವು; ಸುತ್ತಣವರ ಪರಿಹಾಸ್ಯ ಕುಚೋದ್ಯಗಳಿಗೆ ಗುರಿಯಾದೆವು.

5 ಯೆಹೋವನೇ, ಇನ್ನೆಷ್ಟರವರೆಗೆ ಕೋಪವುಳ್ಳವನಾಗಿರುವಿ? ನಿನ್ನ ರೋಷಾಗ್ನಿಯು ಸದಾಕಾಲವೂ ಉರಿಯುತ್ತಲೇ ಇರಬೇಕೋ?

6 ನಿನ್ನನ್ನು ಅರಿಯದ ಮ್ಲೇಚ್ಫರ ಮೇಲೆಯೂ ನಿನ್ನ ನಾಮವನ್ನು ಉಚ್ಚರಿಸದ ರಾಜ್ಯಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು.

7 ಅವರು ಯಾಕೋಬ್‍ವಂಶದವರನ್ನು ನುಂಗಿಬಿಟ್ಟು ಅವರ ವಾಸಸ್ಥಳಗಳನ್ನು ಹಾಳುಮಾಡಿದರಲ್ಲಾ.

8 ಪೂರ್ವಿಕರ ಅಪರಾಧಗಳನ್ನು ನಮ್ಮ ಹಾನಿಗಾಗಿ ನೆನಸಿಕೊಳ್ಳಬೇಡ. ಬೇಗನೆ ನಿನ್ನ ಕನಿಕರವು ನಮ್ಮನ್ನು ಎದುರುಗೊಳ್ಳಲಿ; ಬಹುವಾಗಿ ಕುಗ್ಗಿಹೋಗಿದ್ದೇವೆ.

9 ನಮ್ಮನ್ನು ರಕ್ಷಿಸುವ ದೇವರೇ, ನಿನ್ನ ನಾಮದ ಘನತೆಗೋಸ್ಕರ ಸಹಾಯಮಾಡು; ನಿನ್ನ ಹೆಸರಿಗೆ ತಕ್ಕಂತೆ ರಕ್ಷಿಸಿ ನಮ್ಮ ಪಾಪಗಳನ್ನು ಅಳಿಸಿಬಿಡು.

10 ಮ್ಲೇಚ್ಫರು - ಅವರ ದೇವರು ಎಲ್ಲಿ ಎಂದು ಅನ್ನುವದೇಕೆ? ನಿನ್ನ ಸೇವಕರ ರಕ್ತವನ್ನು ಸುರಿಸಿದವರಿಗೆ ನಮ್ಮ ಮುಂದೆಯೇ ದಂಡನೆಯಾದದ್ದು ಜನಾಂಗಗಳಿಗೆ ಗೊತ್ತಾಗಲಿ.

11 ಸೆರೆಹೋದವರ ನರಳುವಿಕೆಯು ನಿನ್ನ ಲಕ್ಷ್ಯಕ್ಕೆ ಬರಲಿ; ಸಾಯಲಿರುವವರನ್ನು ನಿನ್ನ ಭುಜಮಹತ್ತಿನಿಂದ ಉಳಿಸು.

12 ಸ್ವಾವಿುಯೇ, ನಿನ್ನನ್ನು ನಿಂದಿಸಿದ ಸುತ್ತಣ ಜನಾಂಗಗಳ ಉಡಿಲಲ್ಲಿ ಏಳರಷ್ಟು ಪ್ರತಿಫಲವು ತುಂಬಿರುವಂತೆಮಾಡು.

13 ನಿನ್ನ ಪ್ರಜೆಯೂ ನೀನು ಪಾಲಿಸುವ ಮಂದೆಯೂ ಆಗಿರುವ ನಾವಾದರೋ ಸದಾ ನಿನ್ನನ್ನು ಸ್ತುತಿಸುವವರಾಗಿ ಮುಂದಣ ಸಂತಾನದವರೆಲ್ಲರಿಗೂ ನಿನ್ನ ಮಹತ್ತನ್ನು ವರ್ಣಿಸುತ್ತಾ ಹೋಗುವೆವು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು