ಕೀರ್ತನೆಗಳು 77 - ಕನ್ನಡ ಸತ್ಯವೇದವು J.V. (BSI)ದೇವರ ಪ್ರಜಾಪಾಲನೆಯ ವಿಷಯ ಉಂಟಾದ ಸಂಶಯವನ್ನು ಆತನ ಮಹತ್ಕಾರ್ಯಗಳ ಧ್ಯಾನದಿಂದ ನೀಗಿಸಿಕೊಂಡದ್ದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು; ಆಸಾಫನ ಕೀರ್ತನೆ ( ಕೀರ್ತ. 39 ) 1 ದೇವರಿಗೆ ಮೊರೆಯಿಡುವೆನು, ಕೂಗಿ ಮೊರೆಯಿಡುವೆನು; ನನಗೆ ಕಿವಿಗೊಡುವನು. 2 ಇಕ್ಕಟ್ಟಿನಲ್ಲಿ ಸ್ವಾವಿುಯನ್ನು ಕರೆದೆನು; ಬೇಸರವಿಲ್ಲದೆ ಇರುಳೆಲ್ಲಾ ಕೈಯೊಡ್ಡಿಕೊಂಡೇ ಇದ್ದೆನು. ನನ್ನ ಮನಸ್ಸು ಶಾಂತಿಹೊಂದಲೊಲ್ಲದೆ ಇತ್ತು. 3 ನಾನು ವ್ಯಥೆಪಡುತ್ತಾ ದೇವರನ್ನು ಸ್ಮರಿಸುವೆನು; ಮನಗುಂದಿದವನಾಗಿಯೇ ಹಂಬಲಿಸುವೆನು. 4 ನಾನು ರೆಪ್ಪೆಗಳನ್ನು ಹಚ್ಚದಂತೆ ಮಾಡಿದಿ. ತಳಮಳಗೊಂಡು ಮಾತಾಡಲಾರದೆ ಇದ್ದೆನು. 5 ಹಳೆಯ ದಿನಗಳನ್ನೂ ಪುರಾತನ ವರುಷಗಳನ್ನೂ ಯೋಚಿಸಿದೆನು. 6 ನಾನು ರಾತ್ರಿಯಲ್ಲಿ ಮಾಡುತ್ತಿದ್ದ ಗಾನವನ್ನು ನೆನಸಿಕೊಳ್ಳುವೆನು, ನನ್ನ ಆಂತರ್ಯದಲ್ಲಿ ಮಾತಾಡಿಕೊಳ್ಳುವೆನು ಅಂದುಕೊಂಡು ಮನಸ್ಸಿನಲ್ಲಿ ವಿಚಾರಿಸಿಕೊಂಡದ್ದೇನಂದರೆ - 7 ಕರ್ತನು ಸದಾಕಾಲಕ್ಕೂ ಬಿಟ್ಟೇಬಿಡುವನೋ? ಆತನು ಪುನಃ ಪ್ರಸನ್ನನಾಗುವದಿಲ್ಲವೋ? 8 ಆತನ ಕೃಪಾವಾತ್ಸಲ್ಯವು ನಿಂತೇ ಹೋಯಿತೋ? ಆತನ ವಾಗ್ದಾನವು ಎಂದೆಂದಿಗೂ ಬಿದ್ದೇ ಹೋಯಿತೋ? 9 ದೇವರು ದಯವಿಡಲಿಕ್ಕೆ ಮರೆತುಬಿಟ್ಟನೋ? ಕೋಪದಿಂದ ತನ್ನ ಕರುಳುಗಳನ್ನು ಬಿಗಿಹಿಡಿದಿದ್ದಾನೋ? ಸೆಲಾ. 10 ಮತ್ತೂ ನಾನು ಅಂದುಕೊಂಡದ್ದೇನಂದರೆ - ಹೀಗೆ ನೆನಸುವದು ನನ್ನ ಬಲಹೀನತೆಯೇ. ಪರಾತ್ಪರನ ಭುಜಬಲವು ಪ್ರಕಟವಾದ ವರುಷಗಳನ್ನು ಜ್ಞಾಪಿಸಿಕೊಳ್ಳುವೆನು. 11 ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡಿಸಿದ ಅದ್ಭುತಗಳನ್ನು ನೆನಪುಮಾಡಿಕೊಳ್ಳುವೆನು. 12 ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು, ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು. 13 ದೇವರೇ, ನಿನ್ನ ಮಾರ್ಗವು ಪರಿಶುದ್ಧವಾದದ್ದು. ನಮ್ಮ ದೇವರಂತೆ ಮಹತ್ವವುಳ್ಳ ದೇವರು ಯಾರು? 14 ಅದ್ಭುತಗಳನ್ನು ನಡಿಸುವ ದೇವರು ನೀನೇ; ಜನಾಂಗಗಳಲ್ಲಿ ಪರಾಕ್ರಮವನ್ನು ತೋರ್ಪಡಿಸಿದಿ. 15 ಯಾಕೋಬ ಯೋಸೇಫರ ವಂಶೀಯವಾದ ನಿನ್ನ ಪ್ರಜೆಯನ್ನು ಭುಜಬಲದಿಂದ ಬಿಡುಗಡೆ ಮಾಡಿದಿ. ಸೆಲಾ. 16 ದೇವರೇ, ಜಲರಾಶಿಗಳು ನಿನ್ನನ್ನು ಕಂಡವು; ಕಾಣುತ್ತಲೇ ತಳಮಳಗೊಂಡು ತಳದವರೆಗೂ ಅಲ್ಲಕಲ್ಲೋಲವಾದವು. 17 ಮೇಘಮಂಡಲವು ಮಳೆಗರೆಯಿತು; ಅಂತರಿಕ್ಷವು ಗರ್ಜಿಸಿತು; ನಿನ್ನ ಬಾಣಗಳು ಎಲ್ಲಾ ಕಡೆಯೂ ಹಾರಿದವು. 18 ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು; ವಿುಂಚುಗಳು ಭೂಮಂಡಲವನ್ನು ಬೆಳಗಿಸಿದವು; ಭೂವಿುಯು ಅಲ್ಲಾಡಿ ಕಂಪಿಸಿತು. 19 ನೀನು ಸಮುದ್ರದಲ್ಲಿ ಮಾರ್ಗಮಾಡಿದಿ; ಮಹಾಜಲರಾಶಿಗಳನ್ನು ದಾಟಿದಿ; ನಿನ್ನ ಹೆಜ್ಜೆಯ ಗುರುತು ಕಾಣಲಿಲ್ಲ. 20 ಕುರುಬನು ಕುರಿಹಿಂಡನ್ನು ಹೇಗೋ ಹಾಗೆ ನೀನು ಮೋಶೆ ಆರೋನರ ಮುಖಾಂತರ ನಿನ್ನ ಪ್ರಜೆಯನ್ನು ಕರೆದೊಯ್ದಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India