ಕೀರ್ತನೆಗಳು 76 - ಕನ್ನಡ ಸತ್ಯವೇದವು J.V. (BSI)ಶತ್ರುಭೀಕರನಾದ ದೇವರ ಸ್ತುತಿ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ಕೀರ್ತನೆ; ಹಾಡು; ಆಸಾಫನದು ( ಕೀರ್ತ. 75 ) 1 ದೇವರು ಯೆಹೂದದೇಶದಲ್ಲಿ ಖ್ಯಾತಿಗೊಂಡವನು; ಇಸ್ರಾಯೇಲ್ಯರಲ್ಲಿ ಆತನ ನಾಮವು ದೊಡ್ಡದು. 2 ಸಾಲೇವಿುನಲ್ಲಿ ಆತನ ಬೀಡಾರವಿದೆ; ಚೀಯೋನಿನಲ್ಲಿ ಆತನು ನಿವಾಸಿಸುತ್ತಾನೆ. 3 ಅಲ್ಲಿ ಆತನು ವಿುಂಚಿನಂತೆ ಹಾರಿ ಬರುವ ಬಾಣಗಳನ್ನೂ ಗುರಾಣಿ ಖಡ್ಗ ಮುಂತಾದ ಯುದ್ಧಾಯುಧಗಳನ್ನೂ ಮುರಿದುಬಿಟ್ಟಿದ್ದಾನೆ. ಸೆಲಾ. 4 ತೇಜೋಮಯನು ನೀನು; ಬೆಟ್ಟಗಳಲ್ಲಿ ಕೊಳ್ಳೆಹೊಡೆದದರಿಂದ ಹೆಸರುಗೊಂಡವನು. 5 ಧೀರಹೃದಯರು ಸುಲಿಗೆಯಾಗಿ ದೀರ್ಘನಿದ್ರೆಗೈದಿದ್ದಾರೆ; ಎಲ್ಲಾ ಶೂರರ ಕೈ ನಿಂತುಹೋದವು. 6 ಯಾಕೋಬವಂಶದವರ ದೇವರೇ, ನಿನ್ನ ಗದರಿಕೆಯಿಂದ ರಥಬಲವೂ ಅಶ್ವಬಲವೂ ಮೈಮರೆತು ಬಿದ್ದವು. 7 ನೀನು ಮಹಾಭಯಂಕರನು; ನೀನು ಸಿಟ್ಟುಗೊಂಡಾಗ ನಿನ್ನ ಮುಂದೆ ಯಾರು ನಿಂತಾರು? 8 ಪರಲೋಕದಲ್ಲಿರುವ ನೀನು ನಿನ್ನ ನ್ಯಾಯವಿಧಿಯನ್ನು ಆಜ್ಞಾಪಿಸುವಾಗ 9 ದೇವರು ಲೋಕದ ದೀನರನ್ನು ರಕ್ಷಿಸಿ ನ್ಯಾಯವನ್ನು ಸ್ಥಾಪಿಸುವದಕ್ಕೋಸ್ಕರ ಎದ್ದಿದ್ದಾನೆಂದು ಭೂನಿವಾಸಿಗಳು ಭಯದಿಂದ ಸ್ತಬ್ಧರಾದರು. ಸೆಲಾ. 10 ಮನುಷ್ಯರ ಕೋಪವೂ ನಿನ್ನ ಘನಕ್ಕೇ ಸಾಧಕವಾಗುವದು; ಕೋಪಶೇಷವನ್ನು ನಡುಕಟ್ಟಿನಂತೆ ಬಿಗಿದುಕೊಳ್ಳುವಿ. 11 ನಿಮ್ಮ ದೇವನಾದ ಯೆಹೋವನಿಗೆ ಹರಕೆಮಾಡಿ ಸಲ್ಲಿಸಿರಿ; ಸುತ್ತಣವರೆಲ್ಲರು ಭಯಂಕರನಿಗೆ ಕಾಣಿಕೆಗಳನ್ನು ಸಮರ್ಪಿಸಲಿ. 12 ಆತನು ಭೂಪತಿಗಳಿಗೆ ಭಯಪ್ರದನಾಗಿ ಪ್ರಭುಗಳ ಅಹಂಭಾವವನ್ನು ತೊಡೆದುಬಿಡುವನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India