ಕೀರ್ತನೆಗಳು 7 - ಕನ್ನಡ ಸತ್ಯವೇದವು J.V. (BSI)ಅನ್ಯಾಯವಾದ ದೋಷಾರೋಪಣೆಗೆ ಗುರಿಯಾದ ದೇವಭಕ್ತನು ಪ್ರಾರ್ಥಿಸುವದು ಬೆನ್ಯಾಮೀನ್ ಕುಲದವನಾದ ಕೂಷನ ಮಾತುಗಳ ವಿಷಯದಲ್ಲಿ ದಾವೀದನು ಯೆಹೋವನಿಗಾಗಿ ಆವೇಶದಿಂದ ಹಾಡಿದ ಗೀತ ( 1 ಸಮು. 24.9 ) 1 ಯೆಹೋವನೇ, ನನ್ನ ದೇವರೇ, ನಿನ್ನ ಮರೆಹೊಕ್ಕಿದ್ದೇನೆ; ಹಿಂದಟ್ಟುವವರೆಲ್ಲರಿಂದ ತಪ್ಪಿಸಿ ನನ್ನನ್ನು ಕಾಪಾಡು. 2 ಇಲ್ಲವಾದರೆ ನನಗೆ ರಕ್ಷಕನಿಲ್ಲವೆಂದು ತಿಳಿದು ಶತ್ರುವು ಸಿಂಹದಂತೆ ಮೇಲೆ ಬಿದ್ದು ನನ್ನನ್ನು ಹರಿದುಬಿಟ್ಟಾನು. 3 ಯೆಹೋವನೇ, ನನ್ನ ದೇವರೇ, ನಾನು ಕೈಗಳಲ್ಲಿ ಅನ್ಯಾಯವುಳ್ಳವನೂ 4 ವಿುತ್ರದ್ರೋಹಿಯೂ ಆಗಿದ್ದರೆ ಶತ್ರುವು ಹಿಂದಟ್ಟಿ ಬಂದು ನನ್ನನ್ನು ಹಿಡಿದು ನೆಲಕ್ಕೆ ಕೆಡವಿ ತುಳಿಯಲಿ; 5 ನನ್ನ ಮಾನವನ್ನು ಮಣ್ಣುಪಾಲು ಮಾಡಲಿ. ನಾನಂಥವನಲ್ಲ; ನಿಷ್ಕಾರಣವೈರಿಯನ್ನೂ ರಕ್ಷಿಸಿದೆನಲ್ಲಾ. ಸೆಲಾ. 6 ಯೆಹೋವನೇ, ನ್ಯಾಯಸ್ಥಾಪಕನೇ, ನನಗೋಸ್ಕರ ಎಚ್ಚರವಾಗು. ಮಹಾಕೋಪದಿಂದ ಎದ್ದು ಬಂದು ನನ್ನ ವಿರೋಧಿಗಳ ಕ್ರೋಧವನ್ನು ಭಂಗಪಡಿಸು. 7 ಎಲ್ಲಾ ಜನಾಂಗಗಳು ನಿನ್ನ ಸುತ್ತಲು ಸಭೆಯಾಗಿ ಕೂಡಿರುವಲ್ಲಿ ನೀನು ಪುನಹ ಆರೋಹಣಮಾಡು. 8 ಯೆಹೋವನು ಎಲ್ಲಾ ಜನಾಂಗಗಳಿಗೂ ನ್ಯಾಯತೀರಿಸುವವನಾಗಿದ್ದಾನೆ. ಯೆಹೋವನೇ, ನಿರಪರಾಧಿಯೂ ನೀತಿವಂತನೂ ಆಗಿರುವ ನನಗೋಸ್ಕರ ನ್ಯಾಯತೀರಿಸು. 9 ಮನುಷ್ಯರ ಹೃದಯವನ್ನೂ ಅಂತರಿಂದ್ರಿಯವನ್ನೂ ಪರಿಶೋಧಿಸುವ ನೀತಿಸ್ವರೂಪನಾದ ದೇವರೇ, ದುಷ್ಟರ ಕೆಟ್ಟತನವು ಇಲ್ಲದೆ ಹೋಗುವಂತೆ ಮಾಡು; ನೀತಿವಂತರನ್ನು ದೃಢಪಡಿಸು. 10 ನನ್ನನ್ನು ರಕ್ಷಿಸುವ ಗುರಾಣಿಯು ದೇವರೇ; ಆತನು ಯಥಾರ್ಥರನ್ನು ಕಾಪಾಡುತ್ತಾನೆ. 11 ದೇವರು ನ್ಯಾಯಕ್ಕೆ ಸರಿಯಾಗಿ ತೀರ್ಪುಕೊಡುವವನು; ಯಾವಾಗಲೂ [ದುಷ್ಟರ ವಿಷಯದಲ್ಲಿ] ಕೋಪವುಳ್ಳವನು. 12 ದೋಷಿಯು ಮನಸ್ಸನ್ನು ಬೇರೆಮಾಡಿಕೊಳ್ಳದೆ ಹೋದರೆ ಆತನು ತನ್ನ ಕತ್ತಿಯನ್ನು ಮಸೆಯುವನು. ತನ್ನ ಬಿಲ್ಲನ್ನು ಬೊಗ್ಗಿಸಿ ಸಿದ್ಧಮಾಡಿದ್ದಾನೆ. 13 ಆತನು ಅದಕ್ಕೆ ಮರಣಕರವಾದ ಅಗ್ನಿ ಬಾಣಗಳನ್ನು ಹೂಡಿ ಅವನ ಮೇಲೆ ಪ್ರಯೋಗಿಸುವದಕ್ಕೆ ಗುರಿಯಿಟ್ಟು ನಿಂತಿದ್ದಾನೆ. 14 ನನ್ನ ಶತ್ರುವು ಕೆಡುಕನ್ನು ಹೆರಬೇಕೆಂದು ಪ್ರಸವ ವೇದನೆಯಲ್ಲಿದ್ದಾನೆ; ಅವನು ಹಾನಿಯನ್ನು ಹಡೆಯುವೆನೆಂದು ನೆನಸಿಕೊಂಡರೂ ಶೂನ್ಯವನ್ನೇ ಹೆತ್ತನು ನೋಡಿರಿ. 15 ಅವನು ಅಗೆದು ಅಗೆದು ಗುಂಡಿಯನ್ನು ತೋಡಿ ಅದರೊಳಗೆ ತಾನೇ ಬಿದ್ದುಹೋದನಲ್ಲಾ. 16 ಅವನು ಮಾಡಿದ ಕುಯುಕ್ತಿ ಅವನ ತಲೆಯ ಮೇಲೆಯೇ ಬರುವದು; ಅವನು ಮಾಡಬೇಕೆಂದಿದ್ದ ಅನ್ಯಾಯವು ಸ್ವಂತ ಬುರುಡೆಯ ಮೇಲೆ ಬೀಳುವದು. 17 ಯೆಹೋವನು ಮಾಡಿದ ನ್ಯಾಯವಾದ ತೀರ್ಪಿಗಾಗಿ ನಾನು ಆತನನ್ನು ಕೊಂಡಾಡುವೆನು. ಪರಾತ್ಪರದೇವನಾದ ಯೆಹೋವನ ನಾಮವನ್ನು ಸಂಕೀರ್ತಿಸುವೆನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India