Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 65 - ಕನ್ನಡ ಸತ್ಯವೇದವು J.V. (BSI)


ಲೋಕಪರಿಪಾಲನೆಗಾಗಿಯೂ ಫಲಸಮೃದ್ಧಿಗಾಗಿಯೂ ದೇವರನ್ನು ಸ್ತುತಿಸುವ ಕೀರ್ತನೆ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ದಾವೀದನ ಕೀರ್ತನೆ; ಹಾಡು

1 ದೇವರೇ, ಚೀಯೋನಿನಲ್ಲಿ ನಿನಗೋಸ್ಕರ ಸ್ತೋತ್ರವು ಸಿದ್ಧವಾಗಿದೆ; ಹರಕೆಗಳು ನಿನಗೆ ಸಲ್ಲುತ್ತವೆ.

2 ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು.

3 ನನ್ನ ಪಾಪಗಳನ್ನು ನಿವಾರಿಸಲು ನನ್ನಿಂದಾಗುವದಿಲ್ಲ. ಆದರೆ ನಮ್ಮ ದೋಷಪರಿಹಾರಕನು ನೀನೇ.

4 ನಿನ್ನ ಅಂಗಳದಲ್ಲಿ ವಾಸಿಸುವವರಾಗಿ ನಿನ್ನ ಸನ್ನಿಧಿಯಲ್ಲಿ ಸೇವೆಮಾಡುವದಕ್ಕೋಸ್ಕರ ಯಾರನ್ನು ಆರಿಸಿಕೊಳ್ಳುತ್ತೀಯೋ ಅವರೇ ಧನ್ಯರು. ನೀನು ವಾಸಿಸುವ ಮಹಾಪವಿತ್ರಾಲಯದ ಸೌಭಾಗ್ಯದಿಂದ ನಮಗೆ ಸಂತೃಪ್ತಿಯಾಗಲಿ.

5 ನಮ್ಮ ರಕ್ಷಕನಾದ ದೇವರೇ, ನೀನು ಭಯಂಕರ ಮಹತ್ಕಾರ್ಯಗಳನ್ನು ನಡಿಸಿ ನಿನ್ನ ನೀತಿಗನುಸಾರವಾಗಿ ನಮಗೆ ಸದುತ್ತರವನ್ನು ದಯಪಾಲಿಸುವಿ. ಭೂವಿುಯ ಎಲ್ಲಾ ಕಡೆಯವರ, ಬಹುದೂರ ಸಮುದ್ರದ ಆಚೆ ಎಲ್ಲಾ ನಿವಾಸಿಗಳ ನಂಬಿಕೆಗೆ ಆಧಾರನು ನೀನೇ.

6 ನೀನು ಶೌರ್ಯವೆಂಬ ನಡುಕಟ್ಟನ್ನು ಬಿಗಿದುಕೊಂಡು ಬಲದಿಂದ ಪರ್ವತಗಳನ್ನು ಸ್ಥಿರವಾಗಿ ನಿಲ್ಲಿಸಿದವನೂ

7 ಸಮುದ್ರತರಂಗಗಳ ಘೋಷವನ್ನು ತಡೆಯುವವನೂ ಜನಾಂಗಗಳ ದೊಂಬಿಯನ್ನು ಶಾಂತಿಪಡಿಸುವವನೂ ಆಗಿದ್ದೀ.

8 ಭೂವಿುಯ ಕಟ್ಟಕಡೆಗಳಲ್ಲಿ ವಾಸಿಸುವವರೂ ನಿನ್ನ ಅದ್ಭುತಕೃತ್ಯಗಳಿಗಾಗಿ ಭಯಪಡುತ್ತಾರೆ; ಮೂಡಣದಿಂದ ಪಡುವಣದವರೆಗೂ ಇರುವವರನ್ನು ಹರ್ಷಗೊಳಿಸುವಿ.

9 ನೀನು ನಮ್ಮ ದೇಶವನ್ನು ಕಟಾಕ್ಷಿಸಿ ಅದರ ಮೇಲೆ ಮಳೆಸುರಿಸಿ ಚೆನ್ನಾಗಿ ಹದಗೊಳಿಸುತ್ತೀ; ದೇವರೇ, ನಿನ್ನ ಕಾಲುವೆಗಳಲ್ಲಿ ನೀರಿಗೆ ಕೊರತೆ ಇಲ್ಲ. ಹೀಗೆ ಭೂವಿುಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ.

10 ನೇಗಿಲಗೆರೆಗಳನ್ನು ತ್ಯಾವಿಸಿ ಮಳೆಯಿಂದ ಅದರ ಹೆಂಟೆಗಳನ್ನು ಕರಗಿಸಿ ಸಮಮಾಡುತ್ತೀ; ಅದರ ಬೆಳೆಯನ್ನು ವೃದ್ಧಿಪಡಿಸುತ್ತೀ.

11 ನಿನ್ನ ಕೃಪೆಯಿಂದ ಸಂವತ್ಸರಕ್ಕೆ ಸುಭಿಕ್ಷ ಕಿರೀಟವನ್ನು ಇಟ್ಟಿದ್ದೀ; ನೀನು ಹಾದುಹೋಗುವ ಮಾರ್ಗದಲ್ಲೆಲ್ಲಾ ಸಮೃದ್ಧಿಕರವಾದ ವೃಷ್ಟಿಯು ಸುರಿಯುವದು.

12 ಮೇವುಗಾಡುಗಳು ಹಚ್ಚಗೆ ಕಂಗೊಳಿಸುತ್ತವೆ; ಗುಡ್ಡಗಳು ಹರ್ಷವೆಂಬ ನಡುಕಟ್ಟನ್ನು ಬಿಗಿದುಕೊಂಡಂತಿವೆ.

13 ಹುಲ್ಲುಗಾವಲುಗಳು ಕುರಿಹಿಂಡುಗಳೆಂಬ ವಸ್ತ್ರವನ್ನು ಹೊದೆದುಕೊಂಡಿವೆ; ತಗ್ಗುಗಳು ಬೆಳೆಯಿಂದ ಶೋಭಿಸುತ್ತವೆ; ಅವು ಆನಂದಘೋಷಮಾಡಿ ಹಾಡುತ್ತವೋ ಎಂಬಂತಿವೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು