Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 60 - ಕನ್ನಡ ಸತ್ಯವೇದವು J.V. (BSI)


ಪರಾಜಿತರು ದೈವೋತ್ತರವನ್ನು ಆಧಾರಮಾಡಿಕೊಂಡು ಪ್ರಾರ್ಥಿಸುವದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಷೂಷನ್ ಎದೂತೆಂಬ ರಾಗ; ದಾವೀದನು ಎರಡು ನದಿಗಳ ಮಧ್ಯದಲ್ಲಿರುವ ಮತ್ತು ಸೋಬ ಎಂಬ ರಾಜಧಾನಿಯುಳ್ಳ ಅರಾಮ್ ರಾಜ್ಯಗಳ ಸಂಗಡ ಕಾದುವಷ್ಟರೊಳಗೆ ಯೋವಾಬನು ಹಿಂದಿರುಗಿ ಹೋಗಿ ಉಪ್ಪಿನ ತಗ್ಗಿನಲ್ಲಿ ಹನ್ನೆರಡು ಸಾವಿರ ಎದೋಮ್ಯರನ್ನು ಹೊಡೆದಾಗ ದಾವೀದನು ರಚಿಸಿದ ಕಾವ್ಯ. ಬಾಯಿಪಾಠ ಮಾಡಿಸತಕ್ಕದ್ದು
( 2 ಸಮು. 8.3-13 )

1 ದೇವರೇ, ಕೋಪದಿಂದ ನಮ್ಮನ್ನು ತಳ್ಳಿಕೆಡವಿ ಬಿಟ್ಟಿದ್ದೀ; ನಮ್ಮನ್ನು ಎತ್ತಿ ನಿಲ್ಲಿಸು.

2 ನೀನು ದೇಶವನ್ನು ಕಂಪನಗೊಳಿಸಿ ಒಡೆದು ಬಿಟ್ಟಿದ್ದೀ. ಅದರ ಒಡಕುಗಳನ್ನು ಸರಿಮಾಡು; ಅದು ನಡುಗುತ್ತಿರುವದಲ್ಲಾ.

3 ನಿನ್ನ ಜನರನ್ನು ಸಂಕಟಕ್ಕೆ ಗುರಿಪಡಿಸಿದ್ದೀ; ನೀನು ನಮಗೆ ಭ್ರಮಣಮದ್ಯವನ್ನು ಕುಡಿಸಿದ್ದೀ.

4 ನೀನು ನಿನ್ನ ಭಕ್ತರಿಗೆ ಧ್ವಜವನ್ನು ಕೊಟ್ಟದ್ದು ಅವರು ಬಿಲ್ಲುಗಾರರಿಗೆ ಹೆದರಿ ಓಡುವದಕ್ಕೋ? ಸೆಲಾ.

5 ನಿನ್ನ ಪ್ರಿಯರಾದ ನಮ್ಮ ಮೊರೆಯನ್ನು ಲಾಲಿಸಿ ರಕ್ಷಿಸು. ನಿನ್ನ ಭುಜಬಲದಿಂದ ನಮ್ಮನ್ನು ಜಯಗೊಳಿಸು.

6 ದೇವರು ತನ್ನ ಪವಿತ್ರತ್ವವನ್ನು ಸಾಕ್ಷಿಮಾಡಿ ನುಡಿದಿದ್ದಾನೆ. ಜಯಘೋಷಮಾಡುವೆನು; ಶೆಖೆಮ್ ಪ್ರದೇಶವನ್ನು ಹಂಚುವೆನು. ಸುಖೋತ್ ಬೈಲನ್ನು ಅಳೆದುಕೊಡುವೆನು.

7 ಗಿಲ್ಯಾದ್ ಸೀಮೆಯೂ ಮನಸ್ಸೆಯ ದೇಶವೂ ನನ್ನವು; ಎಫ್ರಾಯೀಮ್ ಗೋತ್ರವು ನನಗೆ ಶಿರಸ್ತ್ರಾಣವು. ನನ್ನ ರಾಜದಂಡವು ಯೆಹೂದಕುಲವೇ.

8 ಮೋವಾಬ್ ಪ್ರದೇಶವು ನನ್ನ ಸ್ನಾನಪಾತ್ರೆಯು; ಎದೋಮ್ ಸೀಮೆಯು ನನ್ನ ಕೆರಗಳನ್ನು ಬಿಡುವ ಸ್ಥಳ. ಫಿಲಿಷ್ಟಿಯರು ನನ್ನ ವಿಷಯವಾಗಿ ಕೂಗಿಕೊಳ್ಳಲಿ.

9 ಕೋಟೆಕೊತ್ತಲುಗಳುಳ್ಳ ನಗರಕ್ಕೆ ನನ್ನನ್ನು ಕರೆದುಕೊಂಡು ಹೋಗುವವರು ಯಾರು? ಎದೋಮ್ ಪ್ರಾಂತದೊಳಗೆ ನನ್ನನ್ನು ಸೇರಿಸುವವರು ಯಾರು?

10 ದೇವರೇ, ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲವಲ್ಲಾ! ದೇವರೇ, ನಮ್ಮನ್ನು ಕೈಬಿಟ್ಟಿಯಾ?

11 ನಮಗೆ ಕೈಕೊಟ್ಟು ಶತ್ರುಬಾಧೆಯಿಂದ ಪಾರುಮಾಡು; ಮನುಷ್ಯರ ಸಹಾಯವು ವ್ಯರ್ಥ.

12 ದೇವರಿಂದ ಶೂರಕೃತ್ಯಗಳನ್ನು ನಡಿಸುವೆವು; ನಮ್ಮ ವೈರಿಗಳನ್ನು ತುಳಿದುಬಿಡುವವನು ಆತನೇ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು