Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 55 - ಕನ್ನಡ ಸತ್ಯವೇದವು J.V. (BSI)


ದ್ರೋಹಿಗಳನ್ನು ನಾಶಮಾಡಬೇಕೆಂದು ಯೆಹೋವನಿಗೆ ಪ್ರಾರ್ಥಿಸುವದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ದಾವೀದನ ಪದ್ಯ

1 ದೇವರೇ, ನನ್ನ ಮೊರೆಯನ್ನು ಲಾಲಿಸು; ನನ್ನ ವಿಜ್ಞಾಪನೆಗೆ ಕಿವಿಮುಚ್ಚಿಕೊಳ್ಳಬೇಡ.

2 ನನ್ನ ಕಡೆಗೆ ಲಕ್ಷ್ಯಕೊಟ್ಟು ಸದುತ್ತರವನ್ನು ದಯಪಾಲಿಸು.

3 ಶತ್ರುಗಳ ಅಬ್ಬರ, ದುಷ್ಟರ ಹಿಂಸೆ ಇವುಗಳ ದೆಸೆಯಿಂದ ಪ್ರಲಾಪಿಸುವವನಾಗಿ ಹೊಯ್ದಾಡುತ್ತಾ ನರಳುತ್ತೇನೆ. ಅವರು ನನ್ನ ಮೇಲೆ ಅಪಾಯವನ್ನು ಬರಮಾಡಿ ಕೋಪದಿಂದ ನನ್ನನ್ನು ದ್ವೇಷಿಸುತ್ತಾರೆ.

4 ನನ್ನ ಹೃದಯವು ನೊಂದು ಬೆಂದದೆ; ಮರಣಭಯವು ಆವರಿಸಿಕೊಂಡದೆ.

5 ಅಂಜಿ ನಡುಗುತ್ತೇನೆ; ದಿಗಿಲು ನನ್ನನ್ನು ಹಿಡಿದದೆ.

6 ಆಹಾ, ನನಗೆ ರೆಕ್ಕೆಗಳಿದ್ದರೆ ಪಾರಿವಾಳದಂತೆ ಹಾರಿಹೋಗಿ ಆಶ್ರಯಸೇರಿಕೊಳ್ಳುತ್ತಿದ್ದೆನು.

7 ಅವಸರದಿಂದ ಹಾನಿಕರವಾದ ಬಿರುಗಾಳಿಗೆ ತಪ್ಪಿಸಿಕೊಂಡು

8 ದೂರ ಹೋಗಿ ಅರಣ್ಯಸ್ಥಳದಲ್ಲಿ ಪ್ರವಾಸಿಯಾಗಿರುತ್ತಿದ್ದೆನು ಅಂದುಕೊಂಡೆನು. ಸೆಲಾ.

9 ಕರ್ತನೇ, ಅವರ ಭಾಷೆಯನ್ನು ತಾರು ಮಾರುಮಾಡಿ ಅವರನ್ನು ಭ್ರಾಂತಿಗೊಳಿಸು. ಪಟ್ಟಣದಲ್ಲಿ ಕಲಹಬಲಾತ್ಕಾರಗಳು ಕಾಣಬರುತ್ತವೆ.

10 ಅವೇ ಅದರ ಪೌಳಿಗೋಡೆಗಳ ಮೇಲೆ ಹಗಲಿರುಳು ಸುತ್ತುತ್ತಿರುವ ಕಾವಲುಗಾರರು; ಊರೊಳಗೆ ಕೇಡುತೊಂದರೆಗಳು ಪ್ರಬಲವಾಗಿವೆ.

11 ಅದರೊಳಗೆಲ್ಲಾ ನಾಶನವೇ; ತಿಪ್ಪಲಾಟವೂ ವಂಚನೆಯೂ ಅದರ ಬೀದಿಗಳಿಂದ ತೊಲಗವು.

12 ನನ್ನನ್ನು ದೂಷಿಸುವವನು ವೈರಿಯಾಗಿದ್ದರೆ ತಾಳಿಕೊಂಡೇನು; ನನ್ನನ್ನು ತಿರಸ್ಕರಿಸಿ ಉಬ್ಬಿಕೊಳ್ಳುವವನು ದ್ವೇಷಿಯಾಗಿದ್ದರೆ ಅಡಗಿಕೊಂಡೇನು.

13 ಆದರೆ ನೀನು ನನಗೆ ಸ್ವಕೀಯನೂ ಆಪ್ತವಿುತ್ರನೂ ಅಲ್ಲವೇ.

14 ನಾವು ಪರಸ್ಪರವಾಗಿ ರಸಭರಿತ ಸಂಭಾಷಣೆ ಮಾಡುತ್ತಾ ಭಕ್ತಸಮೂಹದೊಡನೆ ದೇವಾಲಯಕ್ಕೆ ಹೋಗುತ್ತಿದ್ದೆವಲ್ಲಾ.

15 ಆ ದುಷ್ಟರಿಗೆ ಮರಣವು ತಟ್ಟನೆ ಬರಲಿ; ಸಜೀವರಾಗಿಯೇ ಪಾತಾಳಕ್ಕೆ ಇಳಿದು ಹೋಗಲಿ. ಅವರ ಮನೆಯಲ್ಲಿಯೂ ಮನಸ್ಸಿನಲ್ಲಿಯೂ ಕೆಟ್ಟತನವೇ.

16 ನಾನಂತೂ ದೇವರಾದ ಯೆಹೋವನಿಗೆ ಮೊರೆಯಿಡುವೆನು; ಆತನು ನನ್ನನ್ನು ರಕ್ಷಿಸುವನು.

17 ತ್ರಿಕಾಲದಲ್ಲಿಯೂ ಹಂಬಲಿಸುತ್ತಾ ಮೊರೆಯಿಡುವೆನು. ಆತನು ಹೇಗೂ ನನ್ನ ಮೊರೆಯನ್ನು ಕೇಳಿ

18 ನನ್ನ ವಿರೋಧಿಗಳು ಅನೇಕರಿದ್ದರೂ ಅವರು ನನ್ನನ್ನು ಮುಟ್ಟದಂತೆ ಸುರಕ್ಷಿತವಾಗಿ ಇಡುವನು.

19 ಅನಾದಿಕಾಲದಿಂದ ಆಸನಾರೂಢನಾಗಿರುವ ದೇವರು ಲಕ್ಷ್ಯವಿಟ್ಟು ಅವರನ್ನು ತಗ್ಗಿಸಿಬಿಡುವನು. ಸೆಲಾ. ಅವರು ತಮ್ಮ ಸುಖವು ಕದಲದೆಂದುಕೊಂಡು ದೇವರಿಗೆ ಹೆದರುವದಿಲ್ಲ.

20 ಆ ದ್ರೋಹಿಯಾದರೋ ತನ್ನೊಡನೆ ಸಮಾಧಾನದಿಂದಿದ್ದವರ ಮೇಲೆ ವಿರೋಧವಾಗಿ ಕೈಯೆತ್ತಿ ತಾನು ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ.

21 ಅವನ ಬಾಯಿ ಬೆಣ್ಣೆಯಂತೆ ನುಣುಪು; ಹೃದಯವೋ ಕಲಹಮಯವೇ. ಅವನ ನುಡಿಗಳು ಎಣ್ಣೆಗಿಂತ ನಯವಾಗಿದ್ದರೂ ಬಿಚ್ಚುಕತ್ತಿಗಳೇ ಸರಿ.

22 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.

23 ದೇವರೇ, ನೀನು ದುಷ್ಟರನ್ನು ಪಾತಾಳದ ಕೆಳಕ್ಕೆ ದೊಬ್ಬಿಬಿಡುವಿ. ಕೊಲೆಪಾತಕರೂ ವಂಚಕರೂ ನರಾಯುಷ್ಯದ ಅರ್ಧಾಂಶವಾದರೂ ಬದುಕರು. ನಾನಂತೂ ನಿನ್ನನ್ನೇ ನಂಬಿಕೊಂಡಿರುವೆನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು