ಕೀರ್ತನೆಗಳು 54 - ಕನ್ನಡ ಸತ್ಯವೇದವು J.V. (BSI)ವೈರಿಗಳಿಂದ ರಕ್ಷಿಸಬೇಕೆಂದು ಪ್ರಾರ್ಥಿಸುವದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ತಂತಿವಾದ್ಯದೊಡನೆ ಹಾಡ ತಕ್ಕದ್ದು; ಜಿಫೆಂಬ ಸ್ಥಳದವರು ಸೌಲನ ಬಳಿಗೆ ಬಂದು ದಾವೀದನು ತಮ್ಮಲ್ಲೇ ಅಡಗಿಕೊಂಡಿದ್ದಾನೆಂದು ತಿಳಿಸಿದಾಗ ದಾವೀದನು ರಚಿಸಿದ ಪದ್ಯ ( 1 ಸಮು. 23.19 , 26.1 ) 1 ದೇವರೇ, ನಿನ್ನ ನಾಮಮಹತ್ತಿನಿಂದ ನನ್ನನ್ನು ರಕ್ಷಿಸು; ನಿನ್ನ ಪರಾಕ್ರಮದಿಂದ ನನ್ನ ನ್ಯಾಯವನ್ನು ಸ್ಥಾಪಿಸು. 2 ದೇವರೇ, ನನ್ನ ಪ್ರಾರ್ಥನೆಯನ್ನು ಲಾಲಿಸು; ನನ್ನ ಮಾತುಗಳಿಗೆ ಕಿವಿಗೊಡು. 3 ಅನ್ಯರು ನನಗೆ ವಿರೋಧವಾಗಿ ನಿಂತಿದ್ದಾರೆ; ಬಲಾತ್ಕಾರಿಗಳು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ. ಅವರು ದೇವರನ್ನು ಲಕ್ಷಿಸುವದೇ ಇಲ್ಲ. ಸೆಲಾ. 4 ಇಗೋ, ದೇವರೇ ನನಗೆ ಸಹಾಯಕನು; ಕರ್ತನೇ ನನ್ನ ಪ್ರಾಣವನ್ನು ಕಾಪಾಡುವವನು. 5 ನನ್ನ ಕೆಡುಕಿಗೆ ಸಮಯನೋಡುವವರು ತಾವೇ ಕೇಡನ್ನು ಅನುಭವಿಸಲಿ. ನೀನು ನಂಬಿಗಸ್ತನಲ್ಲವೇ; ಅವರನ್ನು ನಿರ್ಮೂಲ ಮಾಡು. 6 ಯೆಹೋವನೇ, ನೀನು ನನ್ನನ್ನು ಸರ್ವಾಪತ್ತುಗಳಿಂದ ಬಿಡಿಸಿ ನನ್ನ ಕಣ್ಣ ಮುಂದೆಯೇ ನನ್ನ ವೈರಿಗಳನ್ನು ಶಿಕ್ಷಿಸಿದ್ದರಿಂದ 7 ನಾನು ಸಂತೋಷದಿಂದ ನಿನಗೆ ಯಜ್ಞವನ್ನು ಸಮರ್ಪಿಸುವೆನು; ಉತ್ತಮೋತ್ತಮವಾಗಿರುವ ನಿನ್ನ ಹೆಸರನ್ನು ಕೊಂಡಾಡುವೆನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India