Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 52 - ಕನ್ನಡ ಸತ್ಯವೇದವು J.V. (BSI)


ದುಷ್ಟಾಧಿಕಾರಿಯ ದುಸ್ವಭಾವವನ್ನು ಖಂಡಿಸುವದು ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು; ದಾವೀದನು ಅಹೀಮೆಲೆಕನ ಮನೆಗೆ ಬಂದ ವರ್ತಮಾನವನ್ನು ಎದೋಮ್ಯನಾದ ದೋಯೇಗನು ಸೌಲನಿಗೆ ತಿಳಿಸಿದಾಗ ದಾವೀದನು ರಚಿಸಿದ ಪದ್ಯ.
( 1 ಸಮು. 21 , 22 )

1 ದುಷ್ಟಾಧಿಕಾರಿಯೇ, ನೀನು ಕೆಡುಕು ಮಾಡಿ ಹಿಗ್ಗುವದೇನು? ದೇವರ ಕೃಪೆಯು ಯಾವಾಗಲೂ ಇರುವದು.

2 ಮೋಸಗಾರನೇ, ನಿನ್ನ ನಾಲಿಗೆಯು ಹದವಾದ ಕ್ಷೌರಕತ್ತಿಯಂತೆ ಅಪಾಯಗಳನ್ನೇ ಕಲ್ಪಿಸುತ್ತದೆ.

3 ಉಪಕಾರಕ್ಕಿಂತಲೂ ಅಪಕಾರವೇ ನಿನಗೆ ಇಷ್ಟ; ನೀತಿಯನ್ನು ಬಿಟ್ಟು ಸುಳ್ಳನ್ನು ಸ್ಥಾಪಿಸುವದೇ ನಿನಗೆ ಸಂತೋಷ. ಸೆಲಾ.

4 ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.

5 ದೇವರು ನಿನ್ನನ್ನು ಎಂದಿಗೂ ಏಳದಂತೆ ಕೆಡವಿ ಬಿಡುವನು; ನಿನ್ನನ್ನು ಹಿಡಿದು ನಿವಾಸದೊಳಗಿಂದ ಕಿತ್ತುಬೀಸಾಡುವನು; ಆತನು ನಿನ್ನನ್ನು ಜೀವಲೋಕದಿಂದ ಬೇರು ಸಹಿತವಾಗಿ ಕಿತ್ತುಹಾಕುವನು. ಸೆಲಾ.

6 ನೀತಿವಂತರು ಅದನ್ನು ನೋಡಿ ಭಯಪಡುವರು; ಅವರು ಪರಿಹಾಸ್ಯಮಾಡುತ್ತಾ -

7 ನೋಡಿರಿ, ದೇವರನ್ನು ಆಶ್ರಯಿಸಿಕೊಳ್ಳದೆ ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ದುಷ್ಟತ್ವವೇ ತನಗೆ ಬಲವೆಂದು ನಂಬಿಕೊಂಡ ಮೂಢನು ಇವನೇ ಎಂದು ಹೇಳುವರು.

8 ಆದರೆ ನಾನು ದೇವಾಲಯದ ಸೊಗಸಾದ ಎಣ್ಣೇ ಮರದಂತಿರುವೆನು; ದೇವರ ಕೃಪೆಯನ್ನು ಯುಗಯುಗಾಂತರಗಳಲ್ಲಿಯೂ ನಂಬಿಕೊಂಡಿರುವೆನು.

9 [ದೇವರೇ] ನಿನ್ನ ಉಪಕಾರಕ್ಕಾಗಿ ಯಾವಾಗಲೂ ನಿನ್ನನ್ನು ಸ್ತುತಿಸುವೆನು; ನಿನ್ನ ನಾಮವು ಸರ್ವೋತ್ತಮವೆಂದು ನಿನ್ನ ಭಕ್ತರ ಮುಂದೆ ಅದನ್ನೇ ನಿರೀಕ್ಷಿಸಿಕೊಂಡಿರುವೆನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು