ಕೀರ್ತನೆಗಳು 49 - ಕನ್ನಡ ಸತ್ಯವೇದವು J.V. (BSI)ಐಶ್ವರ್ಯ ವ್ಯರ್ಥ; ಮರಣ ನಿಶ್ಚಯ; ಸದ್ಭಕ್ತರಿಗೆ ಗತಿಯುಂಟು ಎಂಬದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಕೋರಹೀಯರ ಕೀರ್ತನೆ ( ಕೀರ್ತ. 73 ) 1 ಸಕಲ ದೇಶಗಳವರೇ, ಕೇಳಿರಿ; ಭೂಲೋಕದ ನಿವಾಸಿಗಳಿರಾ, ಕಿವಿಗೊಡಿರಿ. 2 ಜನಗಳೇ ಜನಾಧಿಪತಿಗಳೇ, ಬಡವರೇ ಬಲ್ಲಿದರೇ, ನೀವೆಲ್ಲರೂ ಒಂದಾಗಿ ಬಂದು ಆಲೈಸಿರಿ. 3 ನನ್ನ ಬಾಯಿ ಸುಜ್ಞಾನವನ್ನು ಬೋಧಿಸುವದು; ನನ್ನ ಹೃದಯವು ವಿವೇಕವನ್ನು ಫಲಿಸುವದು. 4 ನಾನು ಧರ್ಮರಹಸ್ಯವನ್ನು ಕಿವಿಗೊಟ್ಟು ಕೇಳಿ ಕಿನ್ನರಿಯನ್ನು ಬಾರಿಸುತ್ತಾ ಅದರ ಗೂಡಾರ್ಥವನ್ನು ಪ್ರಕಟಿಸುವೆನು. 5 ಆಪತ್ತಿನಲ್ಲಿ ಯಾಕೆ ಭಯಪಡಬೇಕು? ದ್ವೇಷಿಗಳು ಮೋಸದಿಂದ ಸುತ್ತಿಕೊಂಡಿರುವಾಗ ನಾನು ಹೆದರುವದೇಕೆ? 6 ಅವರು ತಮ್ಮ ಐಶ್ವರ್ಯವನ್ನೇ ನಂಬಿದ್ದಾರೆ; ತಾವು ಬಹಳ ಆಸ್ತಿವಂತರೆಂದು ಉಬ್ಬಿದ್ದಾರೆ. 7 ಆದರೆ ಯಾವನಾದರೂ ತನ್ನ ಸಹೋದರನು ಸಮಾಧಿಯಲ್ಲಿ ಸೇರದೆ ಶಾಶ್ವತವಾಗಿ ಬದುಕಿರುವದಕ್ಕಾಗಿ 8 ದೇವರಿಗೆ ಈಡನ್ನು ಕೊಟ್ಟು ಅವನ ಪ್ರಾಣವನ್ನು ಬಿಡಿಸಲಾರನು. 9 ಮರಣವನ್ನು ತಪ್ಪಿಸಿಕೊಳ್ಳುವದಕ್ಕೆ ಎಷ್ಟು ಹಣಕೊಟ್ಟರೂ ಸಾಲುವದೇ ಇಲ್ಲ; ಅಂಥ ಪ್ರಯತ್ನವನ್ನು ನಿಷ್ಫಲವೆಂದು ಬಿಟ್ಟೇಬಿಡಬೇಕು. 10 ಸುಜ್ಞಾನಿಗಳು ಸಾಯುವದನ್ನು ನೋಡುತ್ತೇವಲ್ಲಾ; ಹಾಗೆಯೇ ಪಶುಗಳಂತಿರುವ ಜ್ಞಾನಹೀನರೂ ನಾಶವಾಗುತ್ತಾರೆ. ಅವರು ನಂಬಿದ್ದ ಆಸ್ತಿಯು ಇತರರ ಪಾಲಾಗುತ್ತದೆ. 11 ಯಾರು ವಿಸ್ತಾರವಾದ ಭೂಸ್ಥಿತಿಗಳಿಗೆ ತಮ್ಮ ಹೆಸರುಗಳನ್ನು ಕೊಟ್ಟಿದ್ದಾರೋ ಅಂಥವರಿಗೂ ಸಮಾಧಿಯೇ ಶಾಶ್ವತಮಂದಿರವು; ಅದೇ ಅವರ ನಿತ್ಯನಿವಾಸಸ್ಥಾನ. 12 ಮನುಷ್ಯನು ಎಷ್ಟು ಘನವಾದ ಪದವಿಯಲ್ಲಿದ್ದರೂ ಸ್ಥಿರವಿಲ್ಲ; ಪಶುಗಳಂತೆಯೇ ಇಲ್ಲವಾಗುತ್ತಾನೆ. 13 ಮೂರ್ಖರಿಗೂ ಅವರ ಮಾತಿನಂತೆ ನಡೆಯುವವರಿಗೂ ಇದೇ ಗತಿ. ಸೆಲಾ. 14 ಅವರು ಕುರಿಗಳಂತೆ ಪಾತಾಳದಲ್ಲಿ ದಟ್ಟವಾಗಿ ಸೇರಿಸಲ್ಪಡುವರು; ಮೃತ್ಯುವೇ ಅವರ ಪಾಲಕನು. ಅವರಿಗೆ ನಿವಾಸವಿಲ್ಲದ ಹಾಗೆ ಪಾತಾಳವು ಅವರ ರೂಪವನ್ನು ನಾಶಮಾಡುವದು; ಉದಯಕಾಲದಲ್ಲಿ ಯಥಾರ್ಥರು ಅವರ ಮೇಲೆ ದೊರೆತನ ನಡಿಸುವರು. 15 ಆದರೆ ದೇವರು ನನ್ನ ಪ್ರಾಣವನ್ನು ಮೃತ್ಯುಹಸ್ತದಿಂದ ತಪ್ಪಿಸಿ ಸ್ವೀಕಾರ ಮಾಡುವನು. ಸೆಲಾ. 16 ಒಬ್ಬನ ಐಶ್ವರ್ಯವೂ ಗೃಹವೈಭವವೂ ವೃದ್ಧಿಯಾದಾಗ ಕಳವಳಿಸಬೇಡ. 17 ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗಲಾರನಷ್ಟೆ; ಅವನ ವೈಭವವು ಅವನೊಡನೆ ಹೋಗುವದಿಲ್ಲ. 18 ಸಿರಿ ಬಂದಾಗ ಹೆರರ ಹೊಗಳಿಕೆ ತಪ್ಪದು ಎಂಬಂತೆ ಅವನು ಜೀವಮಾನದಲ್ಲಿ ಆತ್ಮಸ್ತುತಿಯಿಂದಲೂ ಜನಸ್ತುತಿಯಿಂದಲೂ ಕೂಡಿದವನಾದರೂ 19 ಪಿತೃಗಳ ಬಳಿಗೆ ಸೇರಿ ಅವರಂತೆಯೇ ಎಂದಿಗೂ ಬೆಳಕನ್ನು ಕಾಣದೆ ಇರುವನು. 20 ವಿವೇಕಹೀನ ಮನುಷ್ಯನು ಎಷ್ಟು ಘನವಾದ ಪದವಿಯಲ್ಲಿದ್ದರೂ ಪಶುಗಳಂತೆಯೇ ಇಲ್ಲವಾಗುತ್ತಾನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India