ಕೀರ್ತನೆಗಳು 47 - ಕನ್ನಡ ಸತ್ಯವೇದವು J.V. (BSI)ಸಾರ್ವಭೌಮನಾದ ಯೆಹೋವನು ಸಿಂಹಾಸನಾರೂಢನಾಗಿರುವದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಕೋರಹೀಯರ ಕೀರ್ತನೆ ( ಕೀರ್ತ. 93 , 95—100 ) 1 ಸರ್ವಜನಾಂಗಗಳಿರಾ, ಚಪ್ಪಾಳೆ ಹೊಡೆಯಿರಿ; ಆರ್ಭಟದಿಂದ ದೇವರಿಗೆ ಜಯಧ್ವನಿ ಮಾಡಿರಿ. 2 ಪರಾತ್ಪರನಾದ ಯೆಹೋವನು ಭಯಂಕರನಾಗಿದ್ದಾನೆ; ಆತನು ಭೂಲೋಕಕ್ಕೆಲ್ಲಾ ಅಧಿರಾಜನಾಗಿದ್ದಾನೆ. 3 ಆತನು ಜನಾಂಗಗಳನ್ನು ನಮಗೆ ಅಧೀನಪಡಿಸಿ ಪರಕುಲದವರನ್ನು ನಮ್ಮ ಕಾಲಕೆಳಗೆ ಹಾಕಿದ್ದಾನೆ. 4 ಆತನು ಯಾಕೋಬವಂಶದವರಾದ ನಮ್ಮನ್ನು ಪ್ರೀತಿಸಿ ನಾವು ಅಭಿಮಾನಿಸುವ ಸ್ವಾಸ್ತ್ಯವನ್ನು ನಿರ್ಣಯಿಸಿಕೊಟ್ಟಿದ್ದಾನೆ. ಸೆಲಾ. 5 ದೇವರು ಜಯಘೋಷದಿಂದ ಏರಿದ್ದಾನೆ; ಯೆಹೋವನು ತುತೂರಿಯ ಧ್ವನಿಯೊಡನೆ ಆರೋಹಣಮಾಡಿದ್ದಾನೆ. 6 ದೇವರನ್ನು ಸಂಕೀರ್ತಿಸಿರಿ, ಕೀರ್ತಿಸಿರಿ; ನಮ್ಮ ಅರಸನನ್ನು ಕೀರ್ತಿಸಿರಿ, ಕೀರ್ತಿಸಿರಿ. 7 ದೇವರು ಭೂಲೋಕಕ್ಕೆಲ್ಲಾ ರಾಜನು; ಆತನನ್ನು ಜ್ಞಾನಯುಕ್ತರಾಗಿ ಕೀರ್ತಿಸಿರಿ. 8 ದೇವರು ಸರ್ವಾಧಿಪತ್ಯವನ್ನು ವಹಿಸಿಕೊಂಡಿದ್ದಾನೆ; ತನ್ನ ಪರಿಶುದ್ಧ ಸಿಂಹಾಸನದಲ್ಲಿ ಕೂತಿದ್ದಾನೆ. 9 ಜನಾಂಗಗಳಲ್ಲಿ ಶ್ರೇಷ್ಠರಾದವರು ಅಬ್ರಹಾಮನ ದೇವರ ಪ್ರಜೆಯಾಗಿರುವದಕ್ಕೆ ಕೂಡಿಬರುತ್ತಾರೆ; ಯಾಕಂದರೆ ಭೂಪಾಲಕರೆಲ್ಲಾ ದೇವರಿಗೇ ಅಧೀನರಾಗಿದ್ದಾರೆ. ಆತನೇ ಸರ್ವೋನ್ನತನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India