ಕೀರ್ತನೆಗಳು 45 - ಕನ್ನಡ ಸತ್ಯವೇದವು J.V. (BSI)ರಾಜವಿವಾಹವರ್ಣನೆ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಶೋಶನ್ನೀಮ್ ಎಂಬ ರಾಗದ ಮೇಲೆ ಹಾಡತಕ್ಕದ್ದು; ಕೋರಹೀಯರ ಪದ್ಯ; ಪ್ರೇಮಗೀತ ( ಯೆಶಾ. 61.10—62.5 ) 1 ಒಂದು ದಿವ್ಯ ವಿಷಯವನ್ನು ಹೇಳುವದಕ್ಕೆ ನನ್ನ ಹೃದಯವು ತವಕಪಡುತ್ತದೆ; ನಾನು ರಾಜನನ್ನು ಕುರಿತು ಈ ಪದ್ಯವನ್ನು ರಚಿಸುವೆನು. ನನ್ನ ನಾಲಿಗೆಯು ಒಳ್ಳೇ ಬರವಣಿಗಸ್ತನ ಲೇಖನಿಯಂತೆ ಸಿದ್ಧವಾಗಿದೆ. 2 ನೀನು ಎಲ್ಲಾ ಮನುಷ್ಯರಿಗಿಂತ ಅತಿಸುಂದರನು; ನಿನ್ನ ಮಾತುಗಳು ಬಹಳ ಮಧುರ; ಇದರಿಂದಲೇ ದೈವಾನುಗ್ರಹವು ಯಾವಾಗಲೂ ನಿನ್ನ ಮೇಲಿದೆ ಎಂಬದು ನಿನ್ನ ಬಾಯ ಮಾತುಗಳಿಂದ ಸ್ಪಷ್ಟವಾಗುತ್ತದೆ. 3 ಶೂರನೇ ಮಹಿಮಪ್ರಭಾವಗಳನ್ನು ಧರಿಸಿಕೊಂಡು ಸೊಂಟಕ್ಕೆ ಪಟ್ಟದ ಕತ್ತಿಯನ್ನು ಕಟ್ಟಿಕೋ. 4 ಸತ್ಯತೆದೈನ್ಯನೀತಿಗಳನ್ನು ಸ್ಥಾಪಿಸುವದಕ್ಕಾಗಿ ಆಡಂಬರದಿಂದ ವಾಹನಾರೂಢನಾಗಿ ವಿಜಯೋತ್ಸವದೊಡನೆ ಹೊರಡೋಣವಾಗಲಿ. ನಿನ್ನ ಭುಜವೀರ್ಯದಿಂದ ಭಯಂಕರಕೃತ್ಯಗಳು ನಡೆಯುವವು. 5 ನಿನ್ನ ಬಾಣಗಳು ಮಹಾತೀಕ್ಷ್ಣವಾಗಿರುವವು; ಅವು ರಾಜವಿರೋಧಿಗಳ ಎದೆಯನ್ನು ಭೇದಿಸುವವು; ಶತ್ರುಜನಾಂಗಗಳು ನಿನ್ನ ಪಾದದ ಕೆಳಗೆ ಬೀಳುವವು. 6 ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವದು; ನಿನ್ನ ರಾಜದಂಡವು ನ್ಯಾಯಸ್ಥಾಪಕವಾದದ್ದೇ. 7 ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ; ಆದದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ. 8 ನಿನ್ನ ದಿವ್ಯಾಂಬರಗಳು ರಕ್ತಬೋಳ ಅಗರು ಚಂದನಗಳಿಂದ ಎಷ್ಟೋ ಸುವಾಸನೆಯುಳ್ಳವುಗಳಾಗಿವೆ; ಗಜದಂತಮಂದಿರಗಳೊಳಗೆ ಉತ್ಕೃಷ್ಟವಾದ್ಯಗಳು ನಿನ್ನನ್ನು ಆನಂದಗೊಳಿಸುವವು. 9 ನಿನ್ನ ಸ್ತ್ರೀಪರಿವಾರದಲ್ಲಿ ರಾಜಕುಮಾರಿಯರೂ ಇದ್ದಾರೆ; ಪಟ್ಟದ ರಾಣಿಯು ಓಫಿರ್ ದೇಶದ ಬಂಗಾರದ ಆಭರಣಗಳಿಂದ ಭೂಷಿತಳಾಗಿ ನಿನ್ನ ಬಲಭಾಗದಲ್ಲಿ ನಿಂತಿರುವಳು. 10 ಎಲೌ ಕುಮಾರಿಯೇ, ನನ್ನ ಮಾತನ್ನು ಕೇಳಿ ಆಲೋಚಿಸು; ಸ್ವಜನರನ್ನೂ ತವರುಮನೆಯನ್ನೂ ಮರೆತುಬಿಡು. 11 ಆಗ ರಾಜನು ನಿನ್ನ ಲಾವಣ್ಯವನ್ನು ನೋಡಲಪೇಕ್ಷಿಸುವನು. ಆತನೇ ನಿನಗೆ ಒಡೆಯನು; ಆತನಿಗೆ ನಮಸ್ಕರಿಸು. 12 ತೂರ್ ಸಂಸ್ಥಾನದವರು ಕಾಣಿಕೆಗಳಿಂದ ನಿನ್ನನ್ನು ಸನ್ಮಾನಿಸುವರು; ಪ್ರಜೆಗಳಲ್ಲಿ ಸ್ಥಿತಿವಂತರು ನಿನ್ನ ದಯೆಯನ್ನು ಕೋರುವರು. 13 ಅಂತಃಪುರದಲ್ಲಿ ರಾಜಕುಮಾರಿಯು ಎಷ್ಟೋ ವೈಭವದಿಂದಿದ್ದಾಳೆ; ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ. 14 ಆಕೆಯು ಬೂಟೇದಾರೀ ಕಸೂತಿಕೆಲಸದ ವಸ್ತ್ರಗಳನ್ನು ಧರಿಸಿಕೊಂಡು ಸಖಿಯರಾದ ಕನ್ಯೆಯರ ಪರಿವಾರದೊಡನೆ ಅರಸನ ಬಳಿಗೆ ಬರುವಳು. 15 ಅವರು ಸಂಭ್ರಮೋತ್ಸವದಿಂದ ಬಂದು ಅರಮನೆಯೊಳಕ್ಕೆ ಪ್ರವೇಶಿಸುವರು. 16 [ಅರಸನೇ,] ವಂಶಪಾರಂಪರ್ಯವಾಗಿ ಬಂದ ಸ್ಥಾನದಲ್ಲಿರುವದಕ್ಕೆ ನಿನಗೆ ಮಕ್ಕಳು ಹುಟ್ಟುವರು; ಅವರನ್ನು ದೇಶದಲ್ಲೆಲ್ಲಾ ಅಧಿಕಾರಿಗಳನ್ನಾಗಿ ನೇವಿುಸುವಿ. 17 ನಿನ್ನ ಹೆಸರು ಯಾವಾಗಲೂ ಜ್ಞಾಪಕದಲ್ಲಿರುವಂತೆ ನಾನು ಮಾಡುವೆನು; ಆದದರಿಂದ ಎಲ್ಲಾ ಜನಗಳು ನಿನ್ನನ್ನು ಯುಗಯುಗಾಂತರಗಳಲ್ಲಿಯೂ ಹೊಗಳುವರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India