Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 44 - ಕನ್ನಡ ಸತ್ಯವೇದವು J.V. (BSI)


ಮುಂಚಿನಂತೆ ಈಗಲೂ ರಕ್ಷಿಸಬೇಕೆಂದು ದೇವರನ್ನು ಪ್ರಾರ್ಥಿಸುವದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಕೋರಹೀಯರ ಪದ್ಯ
( ಕೀರ್ತ. 79 )

1 ದೇವರೇ, ಪೂರ್ವಕಾಲದಲ್ಲಿ ನಮ್ಮ ಪಿತೃಗಳ ದಿನದಲ್ಲಿ ನೀನು ನಡಿಸಿದ ಮಹತ್ಕಾರ್ಯಗಳ ವಿಷಯವನ್ನು ಕೇಳಿದ್ದೇವೆ; ಅವರೇ ನಮಗೆ ತಿಳಿಸಿದರು.

2 ನಿನ್ನ ಹಸ್ತವೇ ಈ ದೇಶದಲ್ಲಿದ್ದ ಜನಾಂಗಗಳನ್ನು ಹೊರಡಿಸಿ ನಮ್ಮ ಪಿತೃಗಳನ್ನೇ ನೆಲೆಗೊಳ್ಳಿಸಿದೆ; ನೀನು ಆ ಅನ್ಯಜನಗಳನ್ನು ತೆಗೆದುಬಿಟ್ಟು ನಮ್ಮವರನ್ನು ಹಬ್ಬಿಸಿದಿ.

3 ನಮ್ಮ ಪಿತೃಗಳಿಗೆ ಕತ್ತಿಯೇ ಈ ದೇಶವನ್ನು ಸ್ವಾಧೀನಮಾಡಿಕೊಡಲಿಲ್ಲ; ಅವರ ಭುಜಬಲವೇ ಅವರಿಗೆ ಜಯಕೊಡಲಿಲ್ಲ. ನಿನ್ನ ಭುಜಬಲ, ಹಸ್ತ, ಪ್ರಸನ್ನತೆ ಇವೇ ಅವರಿಗೆ ಜಯವನ್ನುಂಟುಮಾಡಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ.

4 ದೇವರೇ, ನೀನೇ ನನ್ನ ಅರಸನು; ಯಾಕೋಬವಂಶಕ್ಕೆ ಜಯಪ್ರದನಾಗು.

5 ನಿನ್ನ ಸಹಾಯದಿಂದಲೇ ವೈರಿಗಳನ್ನು ಕೆಡವಿಬಿಡುವೆವು; ನಿನ್ನ ನಾಮಧೇಯದ ಬಲದಿಂದ ಎದುರಾಳಿಗಳನ್ನು ತುಳಿದುಬಿಡುವೆವು.

6 ನಾನು ಬಿಲ್ಲಿನಲ್ಲಿ ಭರವಸವಿಡುವದಿಲ್ಲ; ಕತ್ತಿಯು ನನ್ನನ್ನು ರಕ್ಷಿಸಲಾರದು.

7 ಹಿಂಸಕರಿಂದ ಬಿಡಿಸಿದವನು ನೀನೇ; ನೀನೇ ಹಗೆಗಳಿಗೆ ಆಶಾಭಂಗಪಡಿಸಿದವನು.

8 ದೇವರೇ ನಿನ್ನಲ್ಲಿಯೇ ಯಾವಾಗಲೂ ಹಿಗ್ಗುತ್ತಿದ್ದೇವೆ; ನಿನ್ನ ನಾಮವನ್ನೇ ಸದಾಕಾಲವೂ ಕೀರ್ತಿಸುವೆವು. ಸೆಲಾ.

9 ಆದರೆ ಈಗ ನೀನು ಕೈಬಿಟ್ಟದ್ದರಿಂದ ಅವಮಾನಕ್ಕೆ ಒಳಗಾದೆವಲ್ಲಾ; ನಮ್ಮ ಸೈನ್ಯಗಳ ಸಂಗಡ ನೀನು ಹೊರಡಲಿಲ್ಲ.

10 ನಾವು ಹಗೆಗಳಿಗೆ ಬೆನ್ನುಕೊಟ್ಟು ಓಡಿಹೋಗುವಂತೆ ಮಾಡಿದ್ದೀ; ವೈರಿಗಳು ನಮ್ಮ ಸೊತ್ತನ್ನು ಬೇಕಾದ ಹಾಗೆ ಸೂರೆಮಾಡುತ್ತಾರೆ.

11 ಕುರಿಗಳನ್ನೋ ಎಂಬಂತೆ ನಮ್ಮನ್ನು ಘಾತುಕರಿಗೆ ಒಪ್ಪಿಸಿದ್ದೀ; ಜನಾಂಗಗಳಲ್ಲಿ ನಮ್ಮನ್ನು ಚದರಿಸಿಬಿಟ್ಟಿದ್ದೀ.

12 ನೀನು ಯಾವ ಲಾಭವನ್ನೂ ಹೊಂದದೆ ನಿಷ್ಪ್ರಯೋಜನವಾಗಿ ನಿನ್ನ ಪ್ರಜೆಯನ್ನು ಮಾರಿಬಿಟ್ಟಿದ್ದೀ.

13 ನಮ್ಮನ್ನು ನೆರೆಯವರ ನಿಂದೆಗೆ ಗುರಿಮಾಡಿದ್ದೀ; ಸುತ್ತಣ ಜನಾಂಗಗಳವರ ಪರಿಹಾಸ್ಯಕ್ಕೂ ಕುಚೋದ್ಯಕ್ಕೂ ಈಡಾದೆವು.

14 ನಮ್ಮನ್ನು ಅನ್ಯದೇಶೀಯರ ಗಾದೆಗೆ ಆಸ್ಪದ ಮಾಡಿದ್ದೀ; ಅವರು ನಮ್ಮನ್ನು ನೋಡಿ ತಲೆ ಆಡಿಸುತ್ತಾರೆ.

15 ದೂಷಕರ ನಿಂದಾವಚನಗಳಿಂದಲೂ ಮುಯ್ಯಿತೀರಿಸುವ ವೈರಿಗಳ ದೃಷ್ಟಿಯಿಂದಲೂ

16 ನನಗುಂಟಾಗಿರುವ ಅವಮಾನವು ಯಾವಾಗಲೂ ನನ್ನ ಮುಂದೇ ಇದೆ; ನಾಚಿಕೆಯು ನನ್ನ ಮುಖವನ್ನು ಕವಿದದೆ.

17 ನಾವು ನಿನ್ನನ್ನು ಮರೆಯದೆಯೂ ನಿನ್ನ ನಿಬಂಧನೆಗಳನ್ನು ಮೀರದೆಯೂ ಇದ್ದರೂ ಇದೆಲ್ಲಾ ನಮ್ಮ ಮೇಲೆ ಬಂದಿದೆಯಲ್ಲಾ!

18 ನಮ್ಮ ಹೃದಯವು ಹಿಂದಿರುಗಲಿಲ್ಲ; ನಮ್ಮ ಕಾಲು ನಿನ್ನ ದಾರಿಯಿಂದ ಅಗಲಲಿಲ್ಲ.

19 ನೀನು ನಮ್ಮನ್ನು ಪರಾಜಯಪಡಿಸಿ ನಮ್ಮ ದೇಶವನ್ನು ನರಿಗಳಿರುವ ಕಾಡನ್ನಾಗಿ ಮಾಡಿದ್ದೇಕೆ? ಕಾರ್ಗತ್ತಲು ನಮ್ಮನ್ನು ಕವಿಯುವಂತೆ ಮಾಡಿದ್ದೇಕೆ?

20 ನಾವು ನಮ್ಮ ದೇವರ ಹೆಸರನ್ನು ಮರೆತು ಅನ್ಯದೇವತೆಗಳಿಗೆ ಕೈಯೆತ್ತಿದ್ದರೆ

21 ಹೃದಯರಹಸ್ಯಗಳನ್ನು ಬಲ್ಲವನಾದ ದೇವರು ವಿಚಾರಿಸುತ್ತಿರಲಿಲ್ಲವೋ?

22 ದೇವರೇ, ನಾವು ನಿನ್ನ ನಿವಿುತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ಜನರು ನಮ್ಮನ್ನು ಕೊಯ್ಗುರಿಗಳಂತೆ ಎಣಿಸಿದ್ದಾರೆ.

23 ಕರ್ತನೇ, ಯಾಕೆ ನಿದ್ರಿಸುತ್ತೀ? ಎಚ್ಚರವಾಗು; ಏಳು, ನಮ್ಮನ್ನು ಬಿಟ್ಟೇಬಿಡಬೇಡ.

24 ಯಾಕೆ ವಿಮುಖನಾಗಿದ್ದೀ? ನಮಗಿರುವ ಬಾಧೆಯನ್ನೂ ಹಿಂಸೆಯನ್ನೂ ಯಾಕೆ ಲಕ್ಷಿಸುವದಿಲ್ಲ?

25 ನಮ್ಮ ಪ್ರಾಣವು ಧೂಳಿನಲ್ಲಿ ಅಣಗಿಹೋಗಿದೆ; ಶರೀರವು ನೆಲಕ್ಕೆ ಹತ್ತಿಕೊಂಡಿದೆ.

26 ಎದ್ದು ಬಂದು ಸಹಾಯಮಾಡು; ನಿನ್ನ ಕೃಪೆಯ ನಿವಿುತ್ತ ನಮ್ಮನ್ನು ವಿಮೋಚಿಸು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು