ಕೀರ್ತನೆಗಳು 43 - ಕನ್ನಡ ಸತ್ಯವೇದವು J.V. (BSI)1 ದೇವರೇ, ನ್ಯಾಯವನ್ನು ನಿರ್ಣಯಿಸು; ನನಗೋಸ್ಕರ ವ್ಯಾಜ್ಯವನ್ನು ನಡಿಸಿ ನಿರ್ದಯವಾದ ಜನಾಂಗದಿಂದ ತಪ್ಪಿಸು, ದುರಾಚಾರಿಗಳಾದ ಮೋಸಗಾರರಿಂದ ನನ್ನನ್ನು ಬಿಡಿಸು. 2 ದೇವರೇ, ನೀನು ನನಗೆ ದುರ್ಗಸ್ಥಾನವಲ್ಲವೇ; ಯಾಕೆ ನನ್ನನ್ನು ತಳ್ಳಿಬಿಟ್ಟಿ? ನಾನು ಯಾಕೆ ಶತ್ರುಬಾಧೆಯಿಂದ ದುಃಖಿಸುತ್ತಾ ವಿಕಾರಿಯಾಗಿ ಅಲೆಯಬೇಕು? 3 ನಿನ್ನ ಸತ್ಯಪ್ರಸನ್ನತೆಗಳನ್ನು [ದೂತರನ್ನೋ ಎಂಬಂತೆ] ಕಳುಹಿಸು; ಅವೇ ನಿನ್ನ ಪರಿಶುದ್ಧಪರ್ವತಕ್ಕೆ ನನ್ನನ್ನು ಕರೆದುಕೊಂಡು ಹೋಗಿ ನಿನ್ನ ನಿವಾಸಕ್ಕೆ ಸೇರಿಸಲಿ. 4 ದೇವರೇ, ನನ್ನ ದೇವರೇ, ಆಗ ನಾನು ನಿನ್ನ ಯಜ್ಞವೇದಿಯ ಬಳಿಗೆ, ನನ್ನ ಆನಂದನಿಧಿಯಾಗಿರುವ ನಿನ್ನ ಹತ್ತಿರಕ್ಕೆ, ಸೇರಿ ಕಿನ್ನರಿಯನ್ನು ಬಾರಿಸುತ್ತಾ ನಿನ್ನನ್ನು ಕೊಂಡಾಡುವೆನು. 5 ನನ್ನ ಮನವೇ, ನೀನು ಕುಗ್ಗಿಹೋಗಿರುವದೇನು? ಹೀಗೆ ವ್ಯಥೆಪಡುವದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ; ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India