Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 42 - ಕನ್ನಡ ಸತ್ಯವೇದವು J.V. (BSI)


ದ್ವಿತೀಯ ಭಾಗವು ( 42—72 ) ದೇಶಾಂತರದಲ್ಲಿರುವ ಭಕ್ತನು ದೇವದರ್ಶನಕ್ಕೆ ಕುತೂಹಲಪಡುವದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಕೋರಹೀಯರ ಪದ್ಯ

1 ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಹೇಗೋ ಹಾಗೆಯೇ ನನ್ನ ಮನವು ನಿನ್ನನ್ನು ಬಯಸುತ್ತದೆ.

2 ನನ್ನ ಮನಸ್ಸು ದೇವರಿಗಾಗಿ, ಚೈತನ್ಯ ಸ್ವರೂಪನಾದ ದೇವರಿಗಾಗಿ ಹಾರೈಸುತ್ತದೆ; ನಾನು ಯಾವಾಗ ಹೋಗಿ ದೇವರ ಸನ್ನಿಧಿಯಲ್ಲಿ ಸೇರುವೆನೋ?

3 ನಿನ್ನ ದೇವರು ಎಲ್ಲಿ ಎಂದು ಜನರು ಯಾವಾಗಲೂ ನನ್ನನ್ನು ಗೇಲಿ ಮಾಡುವದರಿಂದ ಹಗಲಿರುಳು ನನಗೆ ಕಣ್ಣೀರೇ ಆಹಾರವಾಯಿತು.

4 ನಾನು ಭಜನೋತ್ಸವದಲ್ಲಿ ಸೇರಿ ಜನಸಮೂಹದೊಡನೆ ಹರ್ಷಧ್ವನಿಮಾಡುತ್ತಾ ಸ್ತೋತ್ರಪದಗಳನ್ನು ಹಾಡುತ್ತಾ ದೇವಾಲಯಕ್ಕೆ ಹೋಗುತ್ತಿದ್ದದ್ದನ್ನೇ ನೆನಪಿಗೆ ತಂದುಕೊಂಡು ನನ್ನೊಳಗೆ ನಾನೇ ಹಂಬಲಿಸುತ್ತಿರುವೆನು.

5 ನನ್ನ ಮನವೇ, ನೀನು ಕುಗ್ಗಿಹೋಗಿರುವದೇನು? ಹೀಗೆ ವ್ಯಥೆಪಡುವದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ. ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.

6 ನನ್ನ ದೇವರೇ, ನನ್ನ ಪ್ರಾಣವು ಕುಗ್ಗಿಹೋಗಿದೆ; ಆದದರಿಂದ ಯೊರ್ದನ್ ಹೊಳೆಯ ದೇಶ, ಹೆರ್ಮೊನ್ ಪರ್ವತ, ವಿುಸಾರ್ ಬೆಟ್ಟ ಇವುಗಳಲ್ಲಿರುವವನಾಗಿ ನಿನ್ನನ್ನು ಸ್ಮರಿಸುತ್ತೇನೆ.

7 ನಿನ್ನ ಜಲಪಾತಗಳಿಂದುಂಟಾಗುವ ಮಹಾಘೋಷವು ಒಂದು ಪ್ರವಾಹವು ಮತ್ತೊಂದು ಪ್ರವಾಹವನ್ನು ಕೂಗುತ್ತದೋ ಎಂಬಂತಿರುವದು. ಹಾಗೆಯೇ ನೀನು ಅಲ್ಲಕಲ್ಲೋಲವಾದ [ದುಃಖ ಪ್ರವಾಹದ] ತೆರೆಗಳನ್ನು ನನ್ನ ತಲೆಯ ಮೇಲೆ ದಾಟಿಸಿದಿಯಲ್ಲಾ.

8 ಯೆಹೋವನು ಹಗಲಿನಲ್ಲಿ ತನ್ನ ಪ್ರೀತಿಯನ್ನು ನನಗೆ ಅನುಗ್ರಹಿಸುವನು; ರಾತ್ರಿವೇಳೆಯಲ್ಲಿಯೂ ಆತನ ಕೀರ್ತನೆ ನನ್ನಲ್ಲಿರುವದು. ನನ್ನ ಜೀವಾಧಾರಕನಾದ ದೇವರನ್ನು ಪ್ರಾರ್ಥಿಸುವೆನು.

9 ನಾನು ನನ್ನ ಶರಣನಿಗೆ - ದೇವರೇ, ಯಾಕೆ ನನ್ನನ್ನು ಮರೆತುಬಿಟ್ಟಿ? ನಾನು ಯಾಕೆ ಶತ್ರುಬಾಧೆಯಿಂದ ದುಃಖಿಸುತ್ತಾ ವಿಕಾರಿಯಾಗಿ ಅಲೆಯಬೇಕು ಎಂದು ಮೊರೆಯಿಡುವೆನು.

10 ನನ್ನ ವಿರೋಧಿಗಳು - ನಿನ್ನ ದೇವರು ಎಲ್ಲಿ ಎಂದು ಯಾವಾಗಲೂ ನನ್ನನ್ನು ಗೇಲಿಮಾಡುವದರಿಂದ ನನ್ನ ಎಲುಬುಗಳೆಲ್ಲಾ ಮುರಿದ ಹಾಗಿವೆ.

11 ನನ್ನ ಮನವೇ, ನೀನು ಕುಗ್ಗಿಹೋಗಿರುವದೇನು? ಹೀಗೆ ವ್ಯಥೆಪಡುವದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ; ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು