Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 41 - ಕನ್ನಡ ಸತ್ಯವೇದವು J.V. (BSI)


ಶತ್ರುಬಾಧಿತನ ಮೊರೆ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ದಾವೀದನ ಕೀರ್ತನೆ

1 ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.

2 ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು; ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು; ಯೆಹೋವನೇ, ಅವನನ್ನು ಶತ್ರುಗಳ ಅಧೀನಕ್ಕೆ ಕೊಡಬೇಡ!

3 ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟುಮಾಡಿದಿಯಲ್ಲಾ, ಸ್ವಾಮೀ.

4 ನಾನಂತೂ - ಯೆಹೋವನೇ, ನಿನ್ನ ಆಜ್ಞೆಯನ್ನು ಮೀರಿ ಪಾಪಮಾಡಿದ್ದೇನೆ; ನನ್ನನ್ನು ಕರುಣಿಸಿ ಸ್ವಸ್ಥಮಾಡು ಅಂದೆನು.

5 ನನ್ನ ಹಾನಿಯನ್ನು ಅಪೇಕ್ಷಿಸುವ ಶತ್ರುಗಳು - ಅವನು ಯಾವಾಗ ಸತ್ತಾನು? ಅವನ ಹೆಸರು ಯಾವಾಗ ಇಲ್ಲದೆಹೋದೀತು ಎಂದು ಹೇಳಿಕೊಳ್ಳುತ್ತಾರೆ.

6 ಅವರಲ್ಲೊಬ್ಬನು ನನ್ನನ್ನು ನೋಡುವದಕ್ಕೆ ಬಂದರೆ ಕಪಟದ ಮಾತನ್ನಾಡುವನು; ಮನಸ್ಸಿನಲ್ಲಿ ಅಶುಭಗಳನ್ನು ಸಂಗ್ರಹಿಸಿಕೊಂಡು ಹೋಗಿ ಹೊರಗೆ ಪ್ರಕಟಿಸುತ್ತಾನೆ.

7 ನನ್ನ ಹಗೆಯವರೆಲ್ಲರು ನನಗೆ ವಿರೋಧವಾಗಿ ಕಿವಿಗಳಲ್ಲಿ ಗುಜುಗುಜು ಮಾತಾಡಿಕೊಳ್ಳುತ್ತಾರೆ; ನನಗೆ ಕೇಡನ್ನು ಕಲ್ಪಿಸುತ್ತಾರೆ.

8 ಅವನನ್ನು ಅಸಾಧ್ಯರೋಗ ಹಿಡಿದದೆ; ಅವನು ಹಾಸಿಗೆಯನ್ನು ಬಿಟ್ಟು ತಿರಿಗಿ ಏಳುವದೇ ಇಲ್ಲವೆಂದು ಹೇಳಿಕೊಳ್ಳುತ್ತಾರೆ.

9 ನಾನು ಯಾವನನ್ನು ನಂಬಿದ್ದೆನೋ ಯಾವನು ನನ್ನ ಮನೆಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡನೋ ಅಂಥ ಆಪ್ತಸ್ನೇಹಿತನು ನನಗೆ ಕಾಲನ್ನು ಅಡ್ಡಗೊಟ್ಟಿದ್ದಾನೆ.

10 ಯೆಹೋವನೇ, ನೀನಾದರೋ ಕರುಣಿಸಿ ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಮುಯ್ಯಿತೀರಿಸುವೆನು.

11 ಶತ್ರುಗಳ ಜಯಧ್ವನಿ ಇಲ್ಲದ್ದರಿಂದಲೇ ನಿನ್ನ ಒಲುಮೆ ನನಗುಂಟೆಂದು ತಿಳಿದುಕೊಳ್ಳುವೆನು.

12 ನಿರ್ದೋಷಿಯಾದ ನನ್ನನ್ನಾದರೋ ನೀನು ಉದ್ಧಾರಮಾಡಿ ನಿನ್ನ ಸನ್ನಿಧಿಯಲ್ಲಿ ಶಾಶ್ವತವಾಗಿ ನಿಲ್ಲಿಸುವಿ.

13 ಇಸ್ರಾಯೇಲ್ಯರ ದೇವರಾದ ಯೆಹೋವನಿಗೆ ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ. ಆಮೆನ್. ಆಮೆನ್.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು