ಕೀರ್ತನೆಗಳು 40 - ಕನ್ನಡ ಸತ್ಯವೇದವು J.V. (BSI)ವಿಶೇಷರಕ್ಷಣೆಗಾಗಿ ಯೆಹೋವನನ್ನು ಸ್ತುತಿಸುವದೂ ಶತ್ರುಗಳಿಂದ ರಕ್ಷಿಸಬೇಕೆಂದು ಪ್ರಾರ್ಥಿಸುವದೂ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ದಾವೀದನ ಕೀರ್ತನೆ 1 ನಾನು ಯೆಹೋವನಿಗೋಸ್ಕರ ನಿರೀಕ್ಷಿಸಿಯೇ ನಿರೀಕ್ಷಿಸಿದೆನು; ಆತನು ನನ್ನ ಮೊರೆಗೆ ಕಿವಿಗೊಟ್ಟು ಲಕ್ಷಿಸಿದನು. 2 ನನ್ನನ್ನು ನಾಶನದ ಗುಂಡಿಯೊಳಗಿಂದ ಎತ್ತಿದನು; ಕೆಸರಿನೊಳಗಿಂದ ನನ್ನನ್ನು ತೆಗೆದು ಬಂಡೆಯ ಮೇಲೆ ನಿಲ್ಲಿಸಿ ನಾನು ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು. 3 ಆತನು ನನ್ನ ಬಾಯಲ್ಲಿ ನೂತನಕೀರ್ತನೆಯನ್ನು ಹುಟ್ಟಿಸಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ. ಆತನ ಮಹತ್ಕಾರ್ಯಗಳನ್ನು ನೋಡಿದ ಅನೇಕರು ಭಯಭಕ್ತಿಯುಳ್ಳವರಾಗಿ ಯೆಹೋವನಲ್ಲಿ ನಂಬಿಕೆಯಿಡುವರು. 4 ಯಾವನು ಅಹಂಕಾರಿಗಳಲ್ಲಿಯೂ ಸುಳ್ಳನ್ನು ಹಿಂಬಾಲಿಸುವವರಲ್ಲಿಯೂ ಸೇರದೆ ಯೆಹೋವನನ್ನೇ ನಂಬುತ್ತಾನೋ ಅವನೇ ಧನ್ಯನು. 5 ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ. 6 ಯಜ್ಞನೈವೇದ್ಯಗಳು ನಿನಗೆ ಇಷ್ಟವಲ್ಲ; ಸರ್ವಾಂಗಹೋಮಗಳನ್ನಾಗಲಿ ದೋಷಪರಿಹಾರಕ ಯಜ್ಞಗಳನ್ನಾಗಲಿ ನೀನು ಅಪೇಕ್ಷಿಸಲಿಲ್ಲ. ಆದರೆ ಶ್ರವಣಶಕ್ತಿಯನ್ನು ನನಗೆ ಅನುಗ್ರಹಿಸಿದಿ. 7 ಆಗ ನಾನು - ಇಗೋ ಇದ್ದೇನೆ; ನನ್ನ ಕರ್ತವ್ಯವು ಗ್ರಂಥದ ಸುರಳಿಯಲ್ಲಿ ಬರೆದದೆ. 8 ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ ಅಂದೆನು. 9 ನೀನು ನೀತಿಯನ್ನು ಸಾಧಿಸಿದ ಶುಭಸಮಾಚಾರವನ್ನು ಧಾರಾಳವಾಗಿ ಮಹಾಸಭೆಯಲ್ಲಿ ಪ್ರಕಟಿಸಿದೆನು; ಯೆಹೋವನೇ, ನೀನೇ ಬಲ್ಲೆ. 10 ನಿನ್ನ ನೀತಿಸಾಧನೆಯನ್ನು ಮರೆಮಾಜಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ಪ್ರಸಿದ್ಧಪಡಿಸಿದೆನು; ನಿನ್ನ ಕೃಪಾಸತ್ಯತೆಗಳನ್ನು ಮಹಾಸಮುದಾಯದಲ್ಲಿ ತಿಳಿಸದೆ ಇರಲಿಲ್ಲ. 11 ಯೆಹೋವನೇ, ನೀನಂತೂ ನಿನ್ನ ಕರುಣೆಯನ್ನು ನನ್ನಿಂದ ಅಗಲಿಸಬೇಡ; ನಿನ್ನ ಕೃಪಾಸತ್ಯತೆಗಳು ನನ್ನನ್ನು ಯಾವಾಗಲೂ ಕಾಪಾಡಲಿ. 12 ಯಾಕಂದರೆ ಲೆಕ್ಕವಿಲ್ಲದ ಆಪತ್ತುಗಳು ನನ್ನನ್ನು ಸುತ್ತಿಕೊಂಡಿವೆ; ನನ್ನ ಪಾಪಗಳು ನನ್ನನ್ನು ಹಿಂದಟ್ಟಿ ಹಿಡಿದಿರುತ್ತವೆ, ನನಗೆ ದಿಕ್ಕೇ ತೋರುವದಿಲ್ಲ. ಅವು ನನ್ನ ತಲೇ ಕೂದಲುಗಳಿಗಿಂತಲೂ ಹೆಚ್ಚಾಗಿವೆ, ನಾನು ಎದೆಗುಂದಿ ಹೋದೆನು. 13 ಯೆಹೋವನೇ, ದಯವಿಟ್ಟು ನನ್ನನ್ನು ರಕ್ಷಿಸು; ಯೆಹೋವನೇ, ಬೇಗ ಬಂದು ಸಹಾಯಮಾಡು. 14 ನನ್ನ ಪ್ರಾಣವನ್ನು ತೆಗೆಯುವದಕ್ಕೆ ಸಮಯ ನೋಡುವವರು ಆಶಾಭಂಗಪಟ್ಟು ಅವಮಾನಹೊಂದಲಿ; ನನ್ನ ಆಪತ್ತಿನಲ್ಲಿ ಸಂತೋಷಿಸುವವರು ಮಾನಭಂಗದಿಂದ ಹಿಂದಿರುಗಿ ಓಡಲಿ. 15 ಆಹಾ, ಆಹಾ ಎಂದು ನನ್ನನ್ನು ಪರಿಹಾಸ್ಯ ಮಾಡುವವರು ತಮಗೆ ಆಗುವ ಅವಮಾನದಿಂದ ವಿಸ್ಮಯಗೊಳ್ಳಲಿ. 16 ನಿನ್ನ ದರ್ಶನವನ್ನು ಕೋರುವವರೆಲ್ಲರು ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ; ನಿನ್ನ ಜಯದಲ್ಲಿ ಆನಂದಿಸುವವರು ಯೆಹೋವನಿಗೆ ಸ್ತೋತ್ರವೆಂದು ಯಾವಾಗಲೂ ಹೇಳುವವರಾಗಲಿ. 17 ನಾನಾದರೋ ಕುಗ್ಗಿದವನೂ ದಿಕ್ಕಿಲ್ಲದವನೂ ಆಗಿದ್ದೇನೆ; ಕರ್ತನೇ ನನ್ನ ಹಿತಚಿಂತಕನು. ನನ್ನ ದೇವರೇ, ನೀನೇ ನನಗೆ ಸಹಾಯಕನೂ ರಕ್ಷಕನೂ ಆಗಿದ್ದೀ; ತಡಮಾಡಬೇಡ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India