Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 39 - ಕನ್ನಡ ಸತ್ಯವೇದವು J.V. (BSI)


ಮನುಷ್ಯನ ಅಸ್ಥಿರತ್ವವನ್ನು ದೇವರ ಮುಂದೆ ಅರಿಕೆಮಾಡುವದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಯೆದೂತೂನನ ರಾಗದ ಪ್ರಕಾರ ಹಾಡತಕ್ಕದ್ದು; ದಾವೀದನ ಕೀರ್ತನೆ

1 ನನ್ನ ನಾಲಿಗೆ ಪಾಪಕ್ಕೆ ಹೋಗದಂತೆ ಜಾಗರೂಕನಾಗಿರುವೆನು; ದುಷ್ಟರು ನನ್ನ ಮುಂದೆ ಇರುವಾಗ ಬಾಯಿಗೆ ಕುಕ್ಕೆಹಾಕಿಕೊಂಡಿರುವೆನು ಅಂದುಕೊಂಡೆನು.

2 ನಾನು ಮೌನವಾಗಿದ್ದೆನು; ಒಳ್ಳೆಯದನ್ನಾದರೂ ಆಡದೆ ಸುಮ್ಮನಿದ್ದೆನು; ಆದರೆ ನನ್ನ ಸಂಕಟವು ಹೆಚ್ಚಿತು.

3 ನನ್ನ ಹೃದಯದಲ್ಲಿ ಸಂತಾಪ ಉಕ್ಕಿತು; ನಾನು ಯೋಚಿಸುತ್ತಿರುವಲ್ಲಿ ಬೆಂಕಿಯುರಿಯಿತು. ಆಗ ನಾನು ಬಾಯಿಬಿಟ್ಟು -

4 ಯೆಹೋವನೇ, ನನಗೆ ಅವಸಾನವುಂಟೆಂದೂ ನನ್ನ ಜೀವಮಾನವು ಅತ್ಯಲ್ಪವೆಂದೂ ನಾನು ಎಷ್ಟೋ ಅಸ್ಥಿರನೆಂದೂ ನನಗೆ ತಿಳಿಯಪಡಿಸು.

5 ನನ್ನ ಆಯುಸ್ಸನ್ನು ಗೇಣುದ್ದವಾಗಿ ಮಾಡಿದ್ದೀಯಲ್ಲಾ; ನನ್ನ ಜೀವಿತಕಾಲ ನಿನ್ನ ಎಣಿಕೆಯಲ್ಲಿ ಏನೂ ಅಲ್ಲ ಅಂದೆನು. ಮನುಷ್ಯನೆಂಬವನು ಎಷ್ಟು ಸ್ಥಿರನೆಂದು ಕಂಡರೂ ಬರೀ ಉಸಿರೇ. ಸೆಲಾ.

6 ನರರು ನಿಜವಲ್ಲದ ಮಾಯಾರೂಪದಿಂದ ಸಂಚರಿಸುವವರು; ಅವರು ಸುಮ್ಮ ಸುಮ್ಮನೆ ಗಡಿಬಿಡಿಮಾಡುವವರು; ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತಾರೆ, ಆದರೆ ಅದು ಯಾರ ಪಾಲಾಗುವದೋ ತಾವೇ ತಿಳಿಯರು.

7 ಹೀಗಿರಲಾಗಿ ಕರ್ತನೇ, ಇನ್ನು ಯಾವದಕ್ಕೆ ಕಾದುಕೊಳ್ಳಲಿ? ನೀನೇ ನನ್ನ ನಿರೀಕ್ಷೆ.

8 ಎಲ್ಲಾ ದ್ರೋಹಗಳಿಂದ ನನ್ನನ್ನು ಬಿಡುಗಡೆ ಮಾಡು; ಮೂರ್ಖರ ನಿಂದೆಗೆ ಗುರಿಮಾಡಬೇಡ.

9 ನೀನೇ ಇದನ್ನು ಬರಮಾಡಿದ್ದರಿಂದ ನಾನು ಏನೂ ಹೇಳದೆ ಮೌನವಾಗಿರುವೆನು.

10 ನಿನ್ನ ದಂಡನೆಯನ್ನು ಪರಿಹರಿಸು; ನಿನ್ನ ಕೈಹೊಡೆತದಿಂದ ಸಾಯುವ ಹಾಗಿದ್ದೇನಲ್ಲಾ.

11 ನೀನು ನರನನ್ನು ಪಾಪದ ನಿವಿುತ್ತ ಗದರಿಸಿ ಶಿಕ್ಷಿಸುವಾಗ ಅವನ ಚೆಲುವಿಕೆಯು ನುಸಿಹತ್ತಿತೋ ಎಂಬಂತೆ ಹಾಳಾಗಿ ಹೋಗುತ್ತದೆ. ಮನುಷ್ಯನೆಂಬವನು ಬರೀ ಉಸಿರೇ. ಸೆಲಾ.

12 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಲಾಲಿಸು; ನನ್ನ ಮೊರೆಗೆ ಕಿವಿಗೊಡು. ನನ್ನ ಕಣ್ಣೀರನ್ನು ನೋಡು, ಸುಮ್ಮನಿರಬೇಡ. ನನ್ನ ಪೂರ್ವಿಕರಂತೆಯೇ ನಾನು ನಿನ್ನ ಮರೆಹೊಕ್ಕಿರುವ ಪ್ರವಾಸಿಯೂ ಪರದೇಶದವನೂ ಆಗಿದ್ದೇನಲ್ಲಾ.

13 ನಾನು ಬಿಟ್ಟುಹೋಗಿ ಇಲ್ಲವಾಗುವದಕ್ಕಿಂತ ಮುಂಚೆ ಸ್ವಲ್ಪ ಸಂತೋಷಪಡುವಂತೆ ನಿನ್ನ ಕೋಪದೃಷ್ಟಿಯನ್ನು ನನ್ನ ಕಡೆಯಿಂದ ತಿರುಗಿಸಿಕೊಳ್ಳಬೇಕು, ದೇವಾ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು