Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 38 - ಕನ್ನಡ ಸತ್ಯವೇದವು J.V. (BSI)


ದುರವಸ್ಥೆಯಲ್ಲಿರುವ ಭಕ್ತನು ದೇವರ ಸಹಾಯವನ್ನು ಬೇಡಿಕೊಳ್ಳುವದು ದಾವೀದನ ಕೀರ್ತನೆ; ಜ್ಞಾಪಕಾರ್ಥನೈವೇದ್ಯ ಸಮರ್ಪಣೆಯಲ್ಲಿ ಹಾಡತಕ್ಕದ್ದು
( ಯಾಜಕ. 2.2 , 6.15 , 24.7 , 8 )

1 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ; ರೋಷದಿಂದ ದಂಡಿಸಬೇಡ.

2 ನಿನ್ನ ಬಾಣಗಳು ನನ್ನೊಳಗೆ ಹೊಕ್ಕಿವೆ; ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿದೆ.

3 ನಿನ್ನ ಸಿಟ್ಟಿನಿಂದ ನನ್ನ ಶರೀರದಲ್ಲಿ ಸ್ವಸ್ಥವೇ ತಪ್ಪಿಹೋಗಿದೆ; ನನ್ನ ಪಾಪದಿಂದ ನನ್ನ ಎಲುಬುಗಳಲ್ಲಿ ಸ್ವಲ್ಪವೂ ಕ್ಷೇಮವಿಲ್ಲ.

4 ನನ್ನ ಅಪರಾಧಗಳು ನನ್ನನ್ನು ಮುಣುಗಿಸಿ ಬಿಟ್ಟವೆ; ಅವು ಹೊರಲಾರದಷ್ಟು ಭಾರವಾದ ಹೊರೆಯಂತೆ ನನ್ನನ್ನು ಅದಿವಿುಬಿಟ್ಟವೆ.

5 ನನ್ನ ಮೂರ್ಖತನದ ಫಲವಾದ ಬಾಸುಂಡೆಗಳು ಕೀವು ಸೋರಿ ದುರ್ವಾಸನೆಯಾಗಿವೆ.

6 ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ; ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ.

7 ನನ್ನ ಸೊಂಟಕ್ಕೆ ಉರಿಬಡಿದಂತಿದೆ; ನನ್ನ ದೇಹದಲ್ಲಿ ಸ್ವಲ್ಪವಾದರೂ ಕ್ಷೇಮವಿಲ್ಲ.

8 ನನಗೆ ಜೋಮುಹಿಡಿದಂತಿದೆ; ಬಹಳ ಮನಗುಂದಿದವನಾದೆನು. ಹೃದಯದ ಸಂಕಟದ ದೆಸೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ.

9 ಕರ್ತನೇ, ನನ್ನ ಅಪೇಕ್ಷೆ ನಿನಗೆ ಗೊತ್ತುಂಟು; ನನ್ನ ನಿಟ್ಟುಸುರು ನಿನಗೆ ಮರೆಯಾಗಿಲ್ಲ.

10 ನನ್ನ ಗುಂಡಿಗೆ ಬಡುಕೊಳ್ಳುತ್ತದೆ; ನನ್ನ ಚೈತನ್ಯವು ಕುಗ್ಗಿಹೋಯಿತು;

11 ನನ್ನ ಕಣ್ಣುಗಳೂ ಮೊಬ್ಬಾಗಿಹೋದವು. ನನ್ನ ಆಪ್ತಸ್ನೇಹಿತರು ನನ್ನ ಜಾಡ್ಯವನ್ನು ನೋಡಿ ಓರೆಯಾಗಿ ಹೋಗುತ್ತಾರೆ; ನನ್ನ ಬಂಧುಗಳು ದೂರ ನಿಲ್ಲುತ್ತಾರೆ.

12 ನನ್ನ ಪ್ರಾಣವನ್ನು ತೆಗೆಯಬೇಕೆಂಬವರು ನನಗೆ ಉರುಲುಗಳನ್ನು ಒಡ್ಡಿದ್ದಾರೆ; ನನ್ನ ವಿಪತ್ತನ್ನು ಕೋರುವವರು ನನಗೆ ನಾಶನವನ್ನೇ ನಿಶ್ಚಯಿಸಿಕೊಂಡು ಯಾವಾಗಲೂ ಮೋಸವನ್ನು ಕಲ್ಪಿಸುತ್ತಿದ್ದಾರೆ.

13 ನಾನಂತೂ ಕಿವುಡನಂತೆ ಕೇಳದವನಾಗಿದ್ದೇನೆ; ಮೂಕನಂತೆ ಬಾಯಿತೆರೆಯುವದೇ ಇಲ್ಲ.

14 ನಾನು ಕಿವಿಕೇಳಿಸದವನಂತೆಯೂ ಪ್ರತ್ಯುತ್ತರಕೊಡಲಾರದವನಂತೆಯೂ ಆದೆನು.

15 ಯೆಹೋವನೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ; ನನ್ನ ಕರ್ತನೇ, ನನ್ನ ದೇವರೇ, ನೀನೇ ಸದುತ್ತರವನ್ನು ಕೊಡುವವನು.

16 ನನ್ನ ವಿಷಯದಲ್ಲಿ ಶತ್ರುಗಳಿಗೆ ಸಂತೋಷವಾಗಬಾರದು; ನಾನು ಜಾರಿಬಿದ್ದರೆ ಹಿಗ್ಗುವರಲ್ಲಾ ಅಂದುಕೊಂಡೆನು.

17 ನನಗೆ ಆಪತ್ತೇ ಸಿದ್ಧವಾಗಿದೆ; ಯಾವಾಗಲೂ ನನಗೆ ಸಂಕಟವದೆ.

18 ನಾನು ಅಪರಾಧಿಯೇ ಹೌದೆಂದು ಒಪ್ಪಿಕೊಳ್ಳುತ್ತೇನೆ; ನನ್ನ ಪಾಪದ ದೆಸೆಯಿಂದಲೇ ನನಗೆ ವ್ಯಸನವುಂಟಾಯಿತು.

19 ನನ್ನ ಶತ್ರುಗಳು ಚುರುಕಾದವರೂ ಬಲಿಷ್ಠರೂ ಆಗಿದ್ದಾರೆ; ನನ್ನನ್ನು ಅನ್ಯಾಯವಾಗಿ ದ್ವೇಷಿಸುವವರು ಬಹುಮಂದಿ.

20 ಉಪಕಾರಕ್ಕೆ ಪ್ರತಿಯಾಗಿ ಅಪಕಾರ ಸಲ್ಲಿಸುವವರು ಒಳ್ಳೆಯದನ್ನು ಅನುಸರಿಸುವ ನನ್ನನ್ನು ಎದುರಿಸುತ್ತಾರೆ.

21 ಯೆಹೋವನೇ, ಕೈ ಬಿಡಬೇಡ; ನನ್ನ ದೇವರೇ, ದೂರವಾಗಿರಬೇಡ.

22 ನನ್ನ ಕರ್ತನೇ, ನನ್ನ ರಕ್ಷಕನೇ, ಬೇಗ ಬಂದು ಸಹಾಯಮಾಡು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು