Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 37 - ಕನ್ನಡ ಸತ್ಯವೇದವು J.V. (BSI)


ದುಷ್ಟರ ಸಂಪತ್ತಿನಲ್ಲಿ ಸದ್ಭಕ್ತರು ನಂಬಿಕೆಯಿಂದಲೇ ಇರಬೇಕೆಂದು ಬೋಧಿಸುವ ಇಬ್ರಿಯ ಅಕ್ಷರಕ್ರಮಾನುಸಾರವಾದ ಕೀರ್ತನೆ ದಾವೀದನ ಕೀರ್ತನೆ
( ಕೀರ್ತ. 39 , 73 )

1 ಕೆಟ್ಟ ನಡತೆಯುಳ್ಳವರನ್ನು ನೋಡಿ ಉರಿಗೊಳ್ಳಬೇಡ; ದುರಾಚಾರಿಗಳಿಗೋಸ್ಕರ ಹೊಟ್ಟೆಕಿಚ್ಚು ಪಡಬೇಡ.

2 ಅವರು ಹುಲ್ಲಿನಂತೆ ಬೇಗ ಒಣಗಿ ಹೋಗುವರು; ಸೊಪ್ಪಿನ ಪಲ್ಯದಂತೆ ಬಾಡಿಹೋಗುವರು.

3 ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು.

4 ಆಗ ಯೆಹೋವನಲ್ಲಿ ಸಂತೋಷಿಸುವಿ; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.

5 ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.

6 ಆತನು ನಿನ್ನ ನೀತಿಯನ್ನು ಉದಯದ ಬೆಳಕಿನಂತೆಯೂ ನಿನ್ನ ನ್ಯಾಯವನ್ನು ಮಧ್ಯಾಹ್ನದ ತೇಜಸ್ಸಿನಂತೆಯೂ ಪ್ರಕಾಶಗೊಳಿಸುವನು.

7 ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು; ಕುಯುಕ್ತಿಗಳನ್ನು ನೆರವೇರಿಸಿಕೊಂಡು ಅಭಿವೃದ್ಧಿ ಹೊಂದುವವನನ್ನು ನೋಡಿ ಉರಿಗೊಳ್ಳಬೇಡ.

8 ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.

9 ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.

10 ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ.

11 ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.

12 ದುಷ್ಟನು ನೀತಿವಂತನಿಗೆ ವಿರೋಧವಾಗಿ ಆಲೋಚಿಸುತ್ತಾನೆ; ಅವನನ್ನು ನೋಡಿ ಹಲ್ಲುಕಡಿಯುತ್ತಾನೆ.

13 ಆದರೆ ಕರ್ತನು ಅವನಿಗೆ ಶಿಕ್ಷಾಕಾಲ ಬರುತ್ತದೆಂದು ನಗುತ್ತಾನೆ.

14 ದುಷ್ಟರು ದೀನದರಿದ್ರರನ್ನು ಕಡಿದುಬಿಡಬೇಕೆಂದು ಕತ್ತಿಯನ್ನು ಹಿರಿದಿದ್ದಾರೆ; ಯಥಾರ್ಥರನ್ನು ಕೊಂದುಹಾಕಬೇಕೆಂದು ಬಿಲ್ಲನ್ನು ಎತ್ತಿದ್ದಾರೆ.

15 ಆದರೆ ಅವರ ಕತ್ತಿ ಅವರ ಎದೆಯನ್ನೇ ಇರಿದುಬಿಡುವದು; ಅವರ ಬಿಲ್ಲುಗಳು ಸಿಡಿದು ಮುರಿದುಹೋಗುವವು.

16 ದುಷ್ಟರ ಮಹಾಸಮೃದ್ಧಿಗಿಂತಲೂ ನೀತಿವಂತನ ಬಡತನವೇ ಲೇಸು.

17 ದುಷ್ಟರ ತೋಳುಗಳು ಮುರಿದುಹೋಗುವವು; ನೀತಿವಂತರನ್ನು ಯೆಹೋವನೇ ಉದ್ಧರಿಸುವನು.

18 ಯೆಹೋವನು ಸದ್ಭಕ್ತರ ಜೀವಮಾನವನ್ನು ಲಕ್ಷಿಸುತ್ತಾನೆ; ಅವರ ಸ್ವಾಸ್ತ್ಯವು ಶಾಶ್ವತವಾಗಿ ನಿಲ್ಲುವದು.

19 ಅವರಿಗೆ ವಿಪತ್ಕಾಲದಲ್ಲಿಯೂ ಆಶಾಭಂಗವಾಗುವದಿಲ್ಲ; ಬರಗಾಲದಲ್ಲಿಯೂ ಅವರಿಗೆ ಕೊರತೆಯಿಲ್ಲ.

20 ದುಷ್ಟರೋ ನಾಶವಾಗಿ ಹೋಗುವರು; ಯೆಹೋವನ ವೈರಿಗಳು ಹುಲ್ಲುಗಾವಲುಗಳ ಸೊಗಸಿನಂತಿದ್ದು ಮಾಯವಾಗುವರು. ಅವರು ಹಬೆಯಂತೆ ತೋರಿ ಅಡಗಿಹೋಗುವರು.

21 ದುಷ್ಟನು ಸಾಲಮಾಡಿಕೊಂಡು ತೀರಿಸಲಾರದೆ ಹೋಗುವನು; ನೀತಿವಂತನು ಪರೋಪಕಾರಿಯಾಗಿ ಧರ್ಮಕೊಡುವನು.

22 ಯೆಹೋವನ ಆಶೀರ್ವಾದವು ಯಾರಿಗಿರುವದೋ ಅವರು ದೇಶವನ್ನು ಅನುಭವಿಸುವರು; ಆತನ ಶಾಪವು ಯಾರಿಗಿರುವದೋ ಅವರು ತೆಗೆದುಹಾಕಲ್ಪಡುವರು.

23 ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ, ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ.

24 ಅವನು ಕೆಳಗೆ ಬಿದ್ದರೂ ಏಳದೆ ಹೋಗುವದಿಲ್ಲ; ಯೆಹೋವನು ಅವನನ್ನು ಕೈಹಿಡಿದು ಉದ್ಧಾರಮಾಡುವನು.

25 ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.

26 ಅವನು ಯಾವಾಗಲೂ ಧರ್ಮಿಷ್ಠನಾಗಿ ಹಣ ಸಹಾಯವನ್ನು ಮಾಡುತ್ತಾನೆ; ಅವನ ಸಂತತಿಯವರು ಆಶೀರ್ವಾದ ಹೊಂದುವರು.

27 ಕೆಟ್ಟದ್ದಕ್ಕೆ ಹೋಗದೆ ಒಳ್ಳೆಯದನ್ನೇ ಮಾಡು; ಆಗ ನೀನು ಯಾವಾಗಲೂ [ದೇಶದಲ್ಲಿ] ವಾಸವಾಗಿರುವಿ.

28 ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು. ದುಷ್ಟರ ಸಂತತಿ ತೆಗೆದುಹಾಕಲ್ಪಡುವದು.

29 ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.

30 ನೀತಿವಂತನ ಬಾಯಿಯು ಸುಜ್ಞಾನವನ್ನು ನುಡಿಯುತ್ತದೆ; ಅವನ ನಾಲಿಗೆ ನ್ಯಾಯವನ್ನೇ ಹೇಳುತ್ತದೆ.

31 ದೇವರ ಧರ್ಮೋಪದೇಶವು ಅವನ ಹೃದಯದಲ್ಲಿರುವದು; ಅವನು ಜಾರುವದೇ ಇಲ್ಲ.

32 ದುಷ್ಟನು ಹೊಂಚುಹಾಕಿ ನೀತಿವಂತನನ್ನು ಕೊಲ್ಲಬೇಕೆಂದು ಸಮಯನೋಡುತ್ತಾನೆ.

33 ಆದರೆ ಯೆಹೋವನು ಅವನನ್ನು ಸಿಕ್ಕಗೊಡಿಸುವದಿಲ್ಲ; ಅವನನ್ನು ನ್ಯಾಯವಿಚಾರಣೆಯಲ್ಲಿ ಅಪರಾಧಿಯೆಂದು ಎಣಿಸುವದಿಲ್ಲ.

34 ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವದನ್ನು ನೀನು ನೋಡುವಿ.

35 ದುಷ್ಟನು ಭೀಕರನಾಗಿ ಸ್ವಸ್ಥಳದಲ್ಲಿ ಹಸುರಾಗಿ ಬೆಳೆದ ಮರದಂತೆ ವಿಸ್ತರಿಸಿಕೊಂಡಿರುವದನ್ನು ನೋಡಿದ್ದೆನು.

36 ತರುವಾಯ ನಾನು ಆ ದಾರಿಯಲ್ಲಿ ಹೋಗಿ ನೋಡಲಾಗಿ ಅವನು ಇಲ್ಲದೆ ಹೋಗಿದ್ದನು; ಅವನನ್ನು ಹುಡುಕಿದರೂ ಸಿಕ್ಕಲೇ ಇಲ್ಲ.

37 ಒಳ್ಳೇ ನಡತೆಯುಳ್ಳವನನ್ನು ನೋಡು, ಯಥಾರ್ಥನನ್ನು ಲಕ್ಷಿಸು; ಶಾಂತನಿಗೆ ಸಂತಾನವೃದ್ಧಿ ಆಗುವದು.

38 ದ್ರೋಹಿಗಳೆಲ್ಲರೂ ನಾಶವಾಗುವರು; ದುಷ್ಟರ ಸಂತಾನವು ತೆಗೆದುಹಾಕಲ್ಪಡುವದು.

39 ನೀತಿವಂತರ ರಕ್ಷಣೆ ಯೆಹೋವನಿಂದಲೇ; ಇಕ್ಕಟ್ಟಿನಲ್ಲಿ ಆತನೇ ಅವರಿಗೆ ದುರ್ಗಸ್ಥಾನ.

40 ಯೆಹೋವನು ಸಹಾಯಕನಾಗಿ ಅವರನ್ನು ತಪ್ಪಿಸಿಬಿಡುವನು; ಅವರು ಆತನ ಆಶ್ರಿತರಾದ್ದರಿಂದ ದುಷ್ಟರ ಕೈಯಿಂದ ತಪ್ಪಿಸಿ ರಕ್ಷಿಸುವನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು