ಕೀರ್ತನೆಗಳು 35 - ಕನ್ನಡ ಸತ್ಯವೇದವು J.V. (BSI)ಅಕಾರಣ ವೈರಿಗಳಿಂದ ಬಿಡಿಸಬೇಕೆಂಬದು ದಾವೀದನ ಕೀರ್ತನೆ ( ಕೀರ್ತ. 7 ) 1 ಯೆಹೋವನೇ, ನನ್ನ ಸಂಗಡ ವ್ಯಾಜ್ಯವಾಡುವವರೊಡನೆ ವ್ಯಾಜ್ಯವಾಡು; ನನ್ನ ಮೇಲೆ ಯುದ್ಧಮಾಡುವವರ ಸಂಗಡ ಯುದ್ಧಮಾಡು. 2 ಖೇಡ್ಯಗುರಾಣಿಗಳನ್ನು ಹಿಡಿದುಕೊಂಡು ನನಗೆ ಸಹಾಯಕನಾಗಿ ನಿಲ್ಲು. 3 ನೀನು ಭಲ್ಲೆಯನ್ನೂ ಯುದ್ಧದ ಕೊಡಲಿಯನ್ನೂ ಹಿಡಿದು ನನ್ನನ್ನು ಹಿಂದಟ್ಟುವ ವೈರಿಗಳನ್ನು ಪ್ರತಿಭಟಿಸು; ನಾನೇ ನಿನ್ನನ್ನು ರಕ್ಷಿಸುವೆನೆಂದು ಅಭಯಕೊಡು. 4 ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವವರು ಆಶಾಭಂಗಪಟ್ಟು ಅವಮಾನಹೊಂದಲಿ; ನನಗೆ ಕೇಡನ್ನು ಯೋಚಿಸುವವರು ಮಾನಭಂಗದಿಂದ ಹಿಂದಿರುಗಿ ಓಡಲಿ. 5 ಅವರು ಗಾಳಿ ಹಾರಿಸುವ ಹೊಟ್ಟಿನಂತಾಗಲಿ; ಯೆಹೋವನ ದೂತನು ಅವರನ್ನು ನೂಕಿಬಿಡಲಿ. 6 ಕತ್ತಲೆಯೂ ಜಾರಿಕೆಯೂ ಇರುವ ದಾರಿಯಲ್ಲಿ ಯೆಹೋವನ ದೂತನು ಅವರನ್ನು ಹಿಂದಟ್ಟಲಿ. 7 ಅವರು ನಿಷ್ಕಾರಣವಾಗಿ ನನಗೆ ಬಲೆಯೊಡ್ಡಿದ್ದಾರೆ; ಅಕಾರಣವಾಗಿ ನನ್ನ ಪ್ರಾಣವನ್ನು ತೆಗೆಯಬೇಕೆಂದು ಗುಂಡಿಯನ್ನು ತೋಡಿದ್ದಾರೆ. 8 ಅವನಿಗೆ ನಾಶನವು ಅಕಸ್ಮಾತ್ತಾಗಿ ಬರಲಿ; ತಾನು ಒಡ್ಡಿದ ಬಲೆಯಲ್ಲಿ ತಾನೇ ಸಿಕ್ಕಿಬೀಳಲಿ. ತಾನೇ ತೋಡಿದ ಕುಣಿಯಲ್ಲಿ ತಾನೇ ಬಿದ್ದುಹೋಗಲಿ. 9 ಆಗ ನನ್ನ ಮನಸ್ಸಿಗೆ ಯೆಹೋವನ ದೆಸೆಯಿಂದ ಹರ್ಷವುಂಟಾಗುವದು; ಆತನಿಂದಾದ ರಕ್ಷಣೆಯ ನಿವಿುತ್ತ ಆನಂದಪಡುವೆನು. 10 ಯೆಹೋವನೇ, ಕುಗ್ಗಿದವನನ್ನು ಬಲಾತ್ಕಾರಿಯಿಂದಲೂ ದಿಕ್ಕಿಲ್ಲದ ಬಡವನನ್ನು ಸೂರೆಮಾಡುವವನಿಂದಲೂ ತಪ್ಪಿಸಿ ರಕ್ಷಿಸುವಾತನೇ, ನಿನಗೆ ಸಮಾನರು ಯಾರಿದ್ದಾರೆಂದು ನನ್ನ ಎಲುಬುಗಳೆಲ್ಲಾ ಹೇಳುವವು. 11 ನ್ಯಾಯವಿರುದ್ಧಸಾಕ್ಷಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ; ನಾನರಿಯದ ಸಂಗತಿಗಳ ವಿಷಯದಲ್ಲಿ ನನ್ನನ್ನು ವಿಚಾರಿಸುತ್ತಾರೆ. 12 ಅವರು ಉಪಕಾರಕ್ಕೆ ಅಪಕಾರವನ್ನೇ ಮಾಡುತ್ತಾರೆ; ನಾನು ದಿಕ್ಕಿಲ್ಲದವನಾದೆನು. 13 ನಾನಾದರೋ ಅವರ ಅಸ್ವಸ್ಥಕಾಲದಲ್ಲಿ ಗೋಣಿತಟ್ಟನ್ನೇ ಕಟ್ಟಿಕೊಂಡಿದ್ದೆನು; ಉಪವಾಸದಿಂದ ನನ್ನ ಆತ್ಮವನ್ನು ನೋಯಿಸಿದೆನು. ನನ್ನ ಪ್ರಾರ್ಥನೆಯು ನನ್ನ ಎದೆಗೆ ತಿರುಗಿತು. 14 ಅಸ್ವಸ್ಥನಾದವನನ್ನು ಸ್ನೇಹಿತನೂ ಅಣ್ಣನೂ ಎಂದು ಭಾವಿಸಿ ನಡೆದುಕೊಂಡೆನು; ತಾಯಿ ಸತ್ತದ್ದಕ್ಕಾಗಿ ದುಃಖಿಸುವವನಂತೆ ನಾನು ತಲೆಬಾಗಿ ಅಳುತ್ತಿದ್ದೆನು. 15 ಆದರೂ ನನಗೆ ಆಪತ್ತು ಬಂದಾಗ ಅವರು ಸಂತೋಷಿಸುತ್ತಾ ಕೂಡಿಕೊಂಡರು; ಅಕಾರಣವಾಗಿ ಈ ಭ್ರಷ್ಟರು ನನಗೆ ವಿರೋಧವಾಗಿ ಕೂಡಿಕೊಂಡು ಸೂರೆಮಾಡುವದನ್ನು ಬಿಡಲೇ ಇಲ್ಲ. 16 ದೋಸೆಗೋಸ್ಕರ ಗೇಲಿಮಾಡುವ ಮೂರ್ಖರ ಸಂಗಡ ನನ್ನ ಮೇಲೆ ಹಲ್ಲುಕಡಿಯುತ್ತಾರೆ. 17 ಕರ್ತನೇ, ಇನ್ನೆಷ್ಟರವರೆಗೆ ಸುಮ್ಮನೆ ನೋಡುತ್ತಾ ಇರುವಿ? ಅವರ ಅಪಾಯದಿಂದ ನನ್ನ ಪ್ರಾಣವನ್ನು ಬಿಡಿಸು; ನನ್ನ ಪರಮಪ್ರಿಯಪ್ರಾಣವನ್ನು ಆ ಸಿಂಹಗಳ ಬಾಯಿಗೆ ಸಿಕ್ಕದಂತೆ ತಪ್ಪಿಸು. 18 ಆಗ ನಾನು ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರ ಮುಂದೆ ಸ್ತುತಿಸುವೆನು. 19 ನಿರ್ನಿವಿುತ್ತ ವಿರೋಧಿಗಳು ನನ್ನ ವಿಷಯದಲ್ಲಿ ಹಿಗ್ಗುವದಕ್ಕೆ ಅವಕಾಶಕೊಡಬೇಡ; ನಿಷ್ಕಾರಣವೈರಿಗಳ ಕಣ್ಣುಸನ್ನೆಗೆ ಆಸ್ಪದ ಕೊಡಬೇಡ. 20 ಅವರ ಮಾತುಗಳು ಸಮಾಧಾನಕರವಾದವುಗಳಲ್ಲ; ದೇಶದ ಸಾಧುಜನರನ್ನು ಕೆಡಿಸುವದಕ್ಕೆ ಮೋಸವನ್ನು ಕಲ್ಪಿಸುತ್ತಾರೆ. 21 ಅವರು ನನ್ನನ್ನು ನೋಡಿ ಬಾಯಿಕಿಸಿದು - ಆಹಾ, ಆಹಾ, ನಮ್ಮ ಕಣ್ಣು ಕಂಡಿತಲ್ಲಾ ಅನ್ನುತ್ತಾರೆ. 22 ಯೆಹೋವನೇ, ನೀನೇ ನೋಡಿದಿಯಲ್ಲವೇ? ಸುಮ್ಮನಿರಬೇಡ; ನನ್ನ ಒಡೆಯನೇ, ನನಗೆ ದೂರವಾಗಿರುವದೇಕೆ? 23 ನನ್ನ ದೇವರೇ, ಎದ್ದು ನನಗಾಗಿ ನ್ಯಾಯವನ್ನು ನಿರ್ಣಯಿಸು; ನನ್ನ ಕರ್ತನೇ, ಎಚ್ಚತ್ತು ನನ್ನ ವಿವಾದವನ್ನು ವಿಚಾರಿಸು. 24 ಯೆಹೋವನೇ, ನನ್ನ ದೇವರೇ, ನಿನ್ನ ನೀತಿಗನುಸಾರವಾಗಿ ನನಗೆ ತೀರ್ಪುಕೊಡು; ನನ್ನ ವಿಷಯದಲ್ಲಿ ಹಿಗ್ಗುವದಕ್ಕೆ ಶತ್ರುಗಳಿಗೆ ಆಸ್ಪದವಿರಬಾರದು. 25 ಆಹಾ, ನಮ್ಮ ಆಶೆ ನೆರವೇರಿತು ಅಂದುಕೊಳ್ಳುವದಕ್ಕೆ ಅವರಿಗೆ ಅವಕಾಶವಿರಬಾರದು; ಅವನನ್ನು ನುಂಗಿಬಿಟ್ಟಿದ್ದೇವೆಂದು ಅವರು ಕೊಚ್ಚಿಕೊಳ್ಳಬಾರದು. 26 ನನ್ನ ಕೇಡಿನಲ್ಲಿ ಹಿಗ್ಗುವವರೆಲ್ಲರು ಆಶಾಭಂಗಪಟ್ಟು ಅವಮಾನಹೊಂದಲಿ; ನನ್ನನ್ನು ಹೀಯಾಳಿಸಿ ಆತ್ಮಸ್ತುತಿಮಾಡಿಕೊಳ್ಳುವವರು ಮಾನಭಂಗವನ್ನೂ ದುಷ್ಕೀರ್ತಿಯನ್ನೂ ಹೊದ್ದುಕೊಳ್ಳಲಿ. 27 ನನ್ನ ನ್ಯಾಯಸ್ಥಾಪನೆಯನ್ನು ಬಯಸುವವರು ಆನಂದದೊಡನೆ ಜಯಧ್ವನಿ ಮಾಡಲಿ; ತನ್ನ ಸೇವಕನ ಹಿತವನ್ನು ಕೋರುವ ಯೆಹೋವನಿಗೆ ಸ್ತೋತ್ರ ಎಂದು ಯಾವಾಗಲೂ ಹೇಳುವವರಾಗಲಿ. 28 ನನ್ನ ನಾಲಿಗೆಯು ನಿನ್ನ ನೀತಿಯನ್ನೂ ಮಹಿಮೆಯನ್ನೂ ದಿನವೆಲ್ಲಾ ವರ್ಣಿಸುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India