Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 33 - ಕನ್ನಡ ಸತ್ಯವೇದವು J.V. (BSI)


ಭಕ್ತರಕ್ಷಕನನ್ನು ಕೀರ್ತಿಸುವದು

1 ನೀತಿವಂತರೇ, ಯೆಹೋವನ ವಿಷಯದಲ್ಲಿ ಉಲ್ಲಾಸ ಧ್ವನಿಮಾಡಿರಿ; ಯಥಾರ್ಥಚಿತ್ತರು ಆತನನ್ನು ಸ್ತುತಿಸುವದು ಯುಕ್ತವಾಗಿದೆ.

2 ಕಿನ್ನರಿಯನ್ನು ನುಡಿಸುತ್ತಾ ಯೆಹೋವನನ್ನು ಕೊಂಡಾಡಿರಿ; ಹತ್ತುತಂತಿಗಳ ಸ್ವರಮಂಡಲವನ್ನು ಬಾರಿಸುತ್ತಾ ಸಂಕೀರ್ತಿಸಿರಿ.

3 ಆತನ ಘನಕ್ಕಾಗಿ ನೂತನಕೀರ್ತನೆಯನ್ನು ಹಾಡಿರಿ; ಉತ್ಸಾಹಧ್ವನಿಯೊಡನೆ ಇಂಪಾಗಿ ಬಾರಿಸಿರಿ.

4 ಯೆಹೋವನ ವಚನವು ಯಥಾರ್ಥವಾದದ್ದು; ಆತನ ಕೃತ್ಯವೆಲ್ಲಾ ನಂಬಿಕೆಯಾಗಿದೆ.

5 ಆತನು ನೀತಿನ್ಯಾಯಗಳನ್ನು ಪ್ರೀತಿಸುವವನು; ಭೂಲೋಕವೆಲ್ಲಾ ಯೆಹೋವನ ಕೃಪೆಯಿಂದ ತುಂಬಿದೆ.

6 ಯೆಹೋವನ ಅಪ್ಪಣೆಯಿಂದಲೇ ಆಕಾಶವು ಉಂಟಾಯಿತು; ಅದರಲ್ಲಿರುವದೆಲ್ಲವೂ ಆತನ ಶ್ವಾಸದಿಂದ ನಿರ್ಮಿತವಾಯಿತು.

7 ನೀರುಗಳನ್ನು ಒಟ್ಟುಗೂಡಿಸಿ ಸಮುದ್ರವನ್ನು ಮಾಡಿದವನು ಆತನೇ; ಭೂವಿುಯ ಕೆಳಗೆ ಜಲಾಶಯಗಳನ್ನು ಇಟ್ಟವನು ಆತನೇ.

8 ಭೂಲೋಕದವರೆಲ್ಲರೂ ಯೆಹೋವನಿಗೆ ಭಯಪಡಲಿ; ಭೂನಿವಾಸಿಗಳೆಲ್ಲರೂ ಆತನಿಗೆ ಹೆದರಲಿ.

9 ಆತನು ನುಡಿದ ಮಾತ್ರಕ್ಕೆ ಸಮಸ್ತವೂ ಉಂಟಾಯಿತು; ಆತನು ಆಜ್ಞಾಪಿಸುತ್ತಲೇ ಸರ್ವವೂ ಸ್ಥಾಪನೆಯಾಯಿತು.

10 ಯೆಹೋವನು ಅನ್ಯಜನರ ಸಂಕಲ್ಪಗಳನ್ನು ವ್ಯರ್ಥಮಾಡುತ್ತಾನೆ; ಅವರ ಯೋಚನೆಗಳನ್ನು ನಿಷ್ಫಲಮಾಡುತ್ತಾನೆ.

11 ಯೆಹೋವನ ಆಲೋಚನೆಯೋ ಶಾಶ್ವತವಾಗಿಯೇ ನಿಲ್ಲುವದು; ಆತನ ಸಂಕಲ್ಪವು ಎಂದಿಗೂ ಕದಲುವದಿಲ್ಲ.

12 ಯಾವ ಜನರಿಗೆ ಯೆಹೋವನೇ ದೇವರಾಗಿದ್ದಾನೋ ಯಾವ ಜನಾಂಗದವರನ್ನು ಸ್ವಕೀಯರನ್ನಾಗಿ ಆದುಕೊಂಡಿದ್ದಾನೋ ಅವರೇ ಧನ್ಯರು.

13 ಯೆಹೋವನು ಆಕಾಶದಿಂದ ಮನುಷ್ಯರೆಲ್ಲರನ್ನು ನೋಡುತ್ತಾನೆ;

14 ತಾನಿರುವ ಸ್ಥಾನದಿಂದ ಭೂನಿವಾಸಿಗಳೆಲ್ಲರನ್ನು ದೃಷ್ಟಿಸುತ್ತಾನೆ.

15 ಅವರೆಲ್ಲರ ಹೃದಯಗಳನ್ನು ನಿರ್ಮಿಸಿದವನೂ ಅವರ ಕೃತ್ಯಗಳನ್ನೆಲ್ಲಾ ವಿವೇಚಿಸುವವನೂ ಆತನೇ.

16 ಮಹಾಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವದಿಲ್ಲ; ಯಾವ ಶೂರನೂ ಅಧಿಕವಾದ ಭುಜಬಲದ ದೆಸೆಯಿಂದ ಸುರಕ್ಷಿತನಾಗುವದಿಲ್ಲ.

17 ಜೀವರಕ್ಷಣೆಗಾಗಿ ಕುದುರೆಯು ಪ್ರಯೋಜನವಿಲ್ಲ; ಅದು ತನ್ನ ವಿಶೇಷಬಲದಿಂದ ಯಾರನ್ನೂ ರಕ್ಷಿಸಲಾರದು.

18 ಯೆಹೋವನಾದರೋ ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕಟಾಕ್ಷಿಸುತ್ತಾನೆ; ತನ್ನ ಕೃಪೆಯನ್ನು ನಿರೀಕ್ಷಿಸುವವರನ್ನು ಲಕ್ಷಿಸುತ್ತಾನೆ.

19 ಅವರ ಪ್ರಾಣವನ್ನು ಮರಣದಿಂದ ತಪ್ಪಿಸುವನು; ಬರಗಾಲದಲ್ಲಿ ಅವರ ಜೀವವನ್ನು ಉಳಿಸುವನು.

20 ನಮ್ಮ ಮನಸ್ಸು ಯೆಹೋವನಿಗೋಸ್ಕರ ಕಾದಿದೆ; ನಮ್ಮ ಸಹಾಯವೂ ಗುರಾಣಿಯೂ ಆತನೇ.

21 ಆತನಲ್ಲಿ ನಮ್ಮ ಹೃದಯವು ಸಂತೋಷಿಸುವದು; ಆತನ ಪರಿಶುದ್ಧನಾಮದಲ್ಲಿ ಭರವಸವಿಟ್ಟಿದ್ದೇವೆ.

22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ; ನಿನ್ನ ಕೃಪೆಯು ನಮ್ಮ ಮೇಲೆ ಇರಲಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು