ಕೀರ್ತನೆಗಳು 26 - ಕನ್ನಡ ಸತ್ಯವೇದವು J.V. (BSI)ಸದ್ಭಕ್ತನು ಬಲಾತ್ಕಾರಿಗಳಿಗೆ ತಪ್ಪಿಸಬೇಕೆಂದು ಪ್ರಾರ್ಥಿಸುವದು ದಾವೀದನ ಕೀರ್ತನೆ 1 ಯೆಹೋವನೇ, ನನಗೋಸ್ಕರ ನ್ಯಾಯವನ್ನು ನಿರ್ಣಯಿಸು. ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಂಡಿದ್ದೇನೆ. ನಾನು ಕದಲದೆ ಯೆಹೋವನಲ್ಲೇ ಭರವಸವಿಟ್ಟಿದ್ದೇನೆ. 2 ಯೆಹೋವನೇ, ನನ್ನನ್ನು ಪರೀಕ್ಷಿಸು, ಪರಿಶೀಲಿಸು; ನನ್ನ ಅಂತರಿಂದ್ರಿಯವನ್ನೂ ಹೃದಯವನ್ನೂ ಪರಿಶೋಧಿಸು. 3 ನಿನ್ನ ಕೃಪೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡಿದ್ದೇನೆ; ನಿನ್ನ ಸತ್ಯದಲ್ಲಿ ನಡೆದುಕೊಂಡಿದ್ದೇನೆ. 4 ನಾನು ಕುಟಿಲಸ್ವಭಾವಿಗಳ ಸಹವಾಸಮಾಡುವವನಲ್ಲ; ಕಪಟಿಗಳನ್ನು ಸೇರುವವನಲ್ಲ. 5 ನನಗೆ ದುರ್ಜನರ ಕೂಟವು ಅಸಹ್ಯ; ದುಷ್ಟರ ಸಂಗವು ಬೇಕಿಲ್ಲ. 6 ಯೆಹೋವನೇ, ನಾನು ನಿಷ್ಕಳಂಕನೆಂದು ಕೈಗಳನ್ನು ತೊಳೆದುಕೊಂಡವನಾಗಿ 7 ನಿನ್ನ ಅದ್ಭುತಕೃತ್ಯವರ್ಣನೆಯ ಪದಗಳನ್ನು ಹಾಡುತ್ತಾ ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು. 8 ಯೆಹೋವನೇ, ನಿನ್ನ ನಿವಾಸವು ನನಗೆ ಎಷ್ಟೋ ಪ್ರಿಯ; ನಿನ್ನ ಪ್ರಭಾವಸ್ಥಾನವು ನನಗೆ ಇಷ್ಟ. 9 ಪಾಪಿಷ್ಠರ ಪ್ರಾಣದ ಸಂಗಡ ನನ್ನ ಪ್ರಾಣವನ್ನೂ ತೆಗೆಯಬೇಡ; ಕೊಲೆಪಾತಕರ ಜೀವದೊಂದಿಗೆ ನನ್ನ ಜೀವವನ್ನೂ ತೆಗೆಯಬೇಡ. 10 ಅವರ ಕೈಗಳು ಬಲಾತ್ಕಾರ ನಡಿಸುತ್ತವೆ; ಅವರ ಬಲಗೈ ಲಂಚದಿಂದ ತುಂಬಿದೆ. 11 ನಾನಾದರೋ ನಿರ್ದೋಷಿಯಾಗಿಯೇ ನಡೆದುಕೊಳ್ಳುವವನು; ಯೆಹೋವನೇ, ಅವರಿಂದ ನನ್ನನ್ನು ವಿಮೋಚಿಸಿ ಪ್ರಸನ್ನನಾಗಿರು. 12 ನನ್ನ ಪಾದವು ಸಮಭೂವಿುಯಲ್ಲಿ ನಿಂತಿದೆ; ಕೂಡಿದ ಸಭೆಗಳಲ್ಲಿ ಯೆಹೋವನನ್ನು ಕೊಂಡಾಡುವೆನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India