ಕೀರ್ತನೆಗಳು 25 - ಕನ್ನಡ ಸತ್ಯವೇದವು J.V. (BSI)ಇಬ್ರಿಯ ಅಕ್ಷರಕ್ರಮಾನುಸಾರವಾದ ಪ್ರಾರ್ಥನೆ ದಾವೀದನ ಕೀರ್ತನೆ ( ಕೀರ್ತ. 34 ) 1 ಯೆಹೋವನೇ, ನಿನ್ನಲ್ಲಿ ಮನಸ್ಸಿಟ್ಟಿದ್ದೇನೆ; ನನ್ನ ದೇವರೇ, ನಿನ್ನನ್ನೇ ನಂಬಿದ್ದೇನೆ, 2 ನನಗೆ ಆಶಾಭಂಗಪಡಿಸಬೇಡ. ಶತ್ರುಗಳ ಉತ್ಸಾಹಕ್ಕೆ ಆಸ್ಪದಮಾಡಬೇಡ. 3 ವೃಥಾದ್ರೋಹಿಗಳಿಗೆ ಆಶಾಭಂಗವಾಗಬೇಕೇ ಹೊರತು ನಿನ್ನನ್ನು ನಿರೀಕ್ಷಿಸಿದವರಿಗೆ ಎಂದಿಗೂ ಆಗಬಾರದು. 4 ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು. 5 ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು; ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ. 6 ಯೆಹೋವನೇ, ನೀನು ಆದಿಯಿಂದಲೂ ನನ್ನನ್ನು ಕರುಣಿಸುವವನಾಗಿ ನನಗೆ ಮಾಡಿದ ಮಹೋಪಕಾರಗಳನ್ನು ನೆನಸಿಕೋ. 7 ಯೆಹೋವನೇ, ನನ್ನ ಯೌವನದ ತಪ್ಪುಗಳನ್ನೂ ದ್ರೋಹಗಳನ್ನೂ ಮನಸ್ಸಿನಲ್ಲಿಡದೆ ನಿನ್ನ ಕೃಪೆಗೆ ತಕ್ಕಂತೆ ದಯಾಪೂರ್ವಕವಾಗಿ ನನ್ನನ್ನು ನೆನಸು. 8 ಯೆಹೋವನು ದಯಾಳುವೂ ಸತ್ಯಸ್ವರೂಪನೂ ಆಗಿದ್ದಾನೆ; ದಾರಿತಪ್ಪಿದವರನ್ನು ಬೋಧಿಸಿ ಸನ್ಮಾರ್ಗದಲ್ಲಿ ನಡಿಸುವನು. 9 ಆತನು ದೀನರನ್ನು ತನ್ನ ವಿಧಿಗನುಗುಣವಾಗಿ ನಡಿಸುವನು; ಅವರಿಗೆ ತನ್ನ ಮಾರ್ಗವನ್ನು ತೋರಿಸುವನು. 10 ಯೆಹೋವನ ವಿಧಿನಿಬಂಧನೆಗಳನ್ನು ಕೈಕೊಂಡು ನಡೆಯುವವರಿಗೆ ಆತನ ಎಲ್ಲಾ ಮಾರ್ಗಗಳು ಕೃಪೆಯೂ ಸತ್ಯತೆಯೂ ಉಳ್ಳವು. 11 ಯೆಹೋವನೇ, ನನ್ನ ಪಾಪವು ಬಹುಘೋರವಾಗಿದೆ; ಆದರೂ ನಿನ್ನ ಹೆಸರಿನ ನಿವಿುತ್ತ ಅದನ್ನು ಕ್ಷವಿುಸು. 12 ಯಾವನು ಯೆಹೋವನಲ್ಲಿ ಭಯಭಕ್ತಿಯುಳ್ಳವನೋ ಅವನಿಗೆ ಉಚಿತವಾದ ಮಾರ್ಗವನ್ನು ಆತನು ಬೋಧಿಸುವನು. 13 ಅವನು ಸುಖದಿಂದಲೇ ಇರುವನು; ಅವನ ಸಂತತಿಯವರು ದೇಶವನ್ನು ಅನುಭವಿಸುವರು. 14 ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತವಿುತ್ರನಂತಿರುವನು; ಅವರಿಗೇ ತನ್ನ ಒಡಂಬಡಿಕೆಯ ಅನುಭವವನ್ನು ದಯಪಾಲಿಸುವನು. 15 ನನ್ನ ದೃಷ್ಟಿ ಯಾವಾಗಲೂ ಯೆಹೋವನಲ್ಲಿದೆ; ಆತನೇ ನನ್ನ ಕಾಲುಗಳನ್ನು ಬಲೆಯಿಂದ ಬಿಡಿಸುವವನು. 16 ನಾನು ಒಬ್ಬೊಂಟಿಗನೂ ಬಾಧೆಪಡುವವನೂ ಆಗಿದ್ದೇನೆ; ನೀನು ಕಟಾಕ್ಷವಿಟ್ಟು ನನ್ನನ್ನು ಕರುಣಿಸು. 17 ನನ್ನ ಮನೋವ್ಯಥೆಗಳನ್ನು ನಿವಾರಿಸು; ಸಂಕಟಗಳಿಂದ ನನ್ನನ್ನು ಬಿಡಿಸು. 18 ನಾನು ಕುಗ್ಗಿರುವದನ್ನೂ ಕಷ್ಟಪಡುವದನ್ನೂ ನೋಡಿ ನನ್ನ ಎಲ್ಲಾ ಪಾಪಗಳನ್ನು ಪರಿಹರಿಸು. 19 ನನಗೆ ಎಷ್ಟೋ ಮಂದಿ ಶತ್ರುಗಳು ಇದ್ದಾರಲ್ಲಾ; ಅವರು ಕಡು ವೈರದಿಂದ ನನ್ನನ್ನು ಹಗೆಮಾಡುತ್ತಾರೆ. 20 ನನ್ನ ಪ್ರಾಣವನ್ನು ಕಾಪಾಡಿ ಉಳಿಸು; ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ, ನನಗೆ ಆಶಾಭಂಗವಾಗಬಾರದು. 21 ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ; ನಿರ್ದೋಷಭಕ್ತಿಯೂ ಯಥಾರ್ಥತ್ವವೂ ನನ್ನನ್ನು ಕಾಯಲಿ. 22 ದೇವರೇ, ಇಸ್ರಾಯೇಲ್ಯರನ್ನು ಎಲ್ಲಾ ಬಾಧೆಗಳಿಂದ ವಿಮೋಚಿಸು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India