ಕೀರ್ತನೆಗಳು 19 - ಕನ್ನಡ ಸತ್ಯವೇದವು J.V. (BSI)ದೇವರ ಸೃಷ್ಟಿ, ಧರ್ಮಶಾಸ್ತ್ರ ಇವುಗಳ ಮಹಿಮೆ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ದಾವೀದನ ಕೀರ್ತನೆ 1 ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ. 2 ದಿನವು ದಿನಕ್ಕೆ ಪ್ರಕಟಿಸುತ್ತಿರುವದು; ರಾತ್ರಿಯು ರಾತ್ರಿಗೆ ಅರುಹುತ್ತಿರುವದು. 3 ಶಬ್ದವಿಲ್ಲ, ಮಾತಿಲ್ಲ, ಅವುಗಳ ಸ್ವರ ಕೇಳಿಸುವದಿಲ್ಲ. 4 ಆದರೂ ಅವುಗಳ ಪ್ರಭುತ್ವವು ಭೂವಿುಯಲ್ಲೆಲ್ಲಾ ಪ್ರಸರಿಸಿದೆ; ಅವುಗಳ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿರುತ್ತವೆ. ಅಲ್ಲಿ ದೇವರು ಸೂರ್ಯನಿಗೋಸ್ಕರ ಗುಡಾರವನ್ನು ಏರ್ಪಡಿಸಿದ್ದಾನೆ. 5 ಅವನು ತನ್ನ ಮಂಟಪದೊಳಗಿಂದ ಬರುವ ಮದಲಿಂಗನೋ ಎಂಬಂತೆ ಹೊರಟು ಬರುವನು. ಅವನು ಶೂರನಂತೆ ತನಗೆ ನೇಮಕವಾದ ಮಾರ್ಗದಲ್ಲಿ ಓಡುವದಕ್ಕೆ ಉಲ್ಲಾಸಗೊಂಡಿದ್ದಾನೆ. 6 ಆಕಾಶದ ಒಂದು ಕಡೆಯಿಂದ ಹೊರಟು ಮತ್ತೊಂದು ಕಡೆಗೆ ಬರುತ್ತಾನೆ; ಅವನ ಬಿಸಲಿಗೆ ಮರೆಯಾದದ್ದು ಒಂದೂ ಇಲ್ಲ. 7 ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. 8 ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ. 9 ಯೆಹೋವನ ಭಯ ಪರಿಶುದ್ಧವಾಗಿದೆ; ಅದು ಶಾಶ್ವತವಾದದ್ದೇ. ಯೆಹೋವನ ವಿಧಿಗಳು ಯಥಾರ್ಥವಾದವುಗಳು; ಅವು ಕೇವಲ ನ್ಯಾಯವಾಗಿವೆ. 10 ಅವು ಬಂಗಾರಕ್ಕಿಂತಲೂ ಅಪರಂಜಿರಾಶಿಗಿಂತಲೂ ಅಪೇಕ್ಷಿಸತಕ್ಕವುಗಳು. ಅವು ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿಯಾಗಿವೆ. 11 ಅವುಗಳ ಮೂಲಕ ನಿನ್ನ ದಾಸನಿಗೆ ಎಚ್ಚರಿಕೆಯಾಗುತ್ತದೆ; ಅವುಗಳನ್ನು ಕೈಕೊಳ್ಳುವದರಿಂದ ಬಹಳ ಫಲ ಉಂಟಾಗುತ್ತದೆ. 12 ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವವನು ಯಾವನು? ಮರೆಯಾದವುಗಳಿಂದ ನನ್ನನ್ನು ನಿರ್ಮಲಮಾಡು. 13 ಅದಲ್ಲದೆ ಬೇಕೆಂದು ಪಾಪಮಾಡದಂತೆ ನಿನ್ನ ದಾಸನನ್ನು ಕಾಪಾಡು. ಅಂಥ ಪಾಪಗಳು ನನ್ನನ್ನು ಆಳದಿರಲಿ. ಆಗ ನಾನು ತಪ್ಪಿಲ್ಲದವನಾಗಿ ಮಹಾ ದ್ರೋಹಕ್ಕೆ ಒಳಗಾಗುವದಿಲ್ಲ. 14 ಯೆಹೋವನೇ, ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India