Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 16 - ಕನ್ನಡ ಸತ್ಯವೇದವು J.V. (BSI)


ಯೆಹೋವನ ಸೇವೆಯು ಪೂರ್ಣಾನಂದಕರವಾದದ್ದು. ದಾವೀದನ ಕಾವ್ಯ

1 ದೇವರೇ, ನಾನು ನಿನ್ನ ಶರಣಾಗತನು; ನನ್ನನ್ನು ಕಾಪಾಡು.

2 ನಾನು ಯೆಹೋವನನ್ನು ಕುರಿತು - ನೀನೇ ನನ್ನ ಒಡೆಯನು; ನನ್ನ ಸುಖವು ನಿನ್ನಲ್ಲಿಯೇ ಹೊರತು ಬೇರೆ ಇಲ್ಲ ಎಂತಲೂ

3 ಭೂಲೋಕದಲ್ಲಿರುವ ದೇವಜನರ ವಿಷಯದಲ್ಲಿ - ಇವರೇ ಶ್ರೆಷ್ಠರು, ಇವರೇ ನನಗೆ ಇಷ್ಟರಾದವರು ಎಂತಲೂ ಹೇಳುವೆನು.

4 ಇತರ ದೇವರುಗಳನ್ನು ಅವಲಂಬಿಸಿದವರಿಗೆ ಬಹಳ ಕಷ್ಟನಷ್ಟಗಳು ಉಂಟಾಗುವವು. ಅವರಂತೆ ನಾನು ರಕ್ತವನ್ನು ಪಾನದ್ರವ್ಯವಾಗಿ ಸಮರ್ಪಿಸುವದೇ ಇಲ್ಲ; ಅವರ ನಾಮಗಳನ್ನಾದರೂ ಉಚ್ಚರಿಸುವದಿಲ್ಲ.

5 ನನ್ನ ಪಾಲೂ ಪಾನವೂ ಯೆಹೋವನೇ; ನೀನೇ ನನ್ನ ಸ್ವಾಸ್ತ್ಯವನ್ನು ಭದ್ರಗೊಳಿಸುತ್ತೀ.

6 ನನಗೆ ಪ್ರಾಪ್ತವಾಗಿರುವ ಸ್ವಾಸ್ತ್ಯವು ರಮಣೀಯವಾದದ್ದು; ಅದು ನನಗೆ ಸಂತೃಪ್ತಿಕರವಾಗಿದೆ.

7 ಯೆಹೋವನು ನನಗೆ ಆಲೋಚನೆಯನ್ನು ಹೇಳಿ ಕೊಡುತ್ತಾನೆ; ಆತನನ್ನು ಕೊಂಡಾಡುವೆನು. ರಾತ್ರಿ ಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ.

8 ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ.

9 ಆದಕಾರಣ ನನ್ನ ಹೃದಯವು ಹರ್ಷಿಸುತ್ತದೆ; ನನ್ನ ಮನವು ಉಲ್ಲಾಸಗೊಳ್ಳುತ್ತದೆ; ನನ್ನ ಶರೀರವೂ ಸುರಕ್ಷಿತವಾಗಿರುವದು.

10 ಯಾಕಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವದಿಲ್ಲ; ನಿನ್ನ ಪ್ರಿಯನಿಗೆ ಅಧೋಲೋಕವನ್ನು ನೋಡಗೊಡಿಸುವದಿಲ್ಲ.

11 ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ; ನಿನ್ನ ಬಲಗೈಯಲ್ಲಿ ಶಾಶ್ವತಭಾಗ್ಯವಿದೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು