Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 147 - ಕನ್ನಡ ಸತ್ಯವೇದವು J.V. (BSI)


ಸೃಷ್ಟಿಪಾಲನೂ ಸ್ವಪ್ರಜಾರಕ್ಷಕನೂ ಆಗಿರುವ ಯೆಹೋವನಿಗೆ ಸ್ತೋತ್ರ
( ಕೀರ್ತ. 33 )

1 ಯಾಹುವಿಗೆ ಸ್ತೋತ್ರ! ನಮ್ಮ ದೇವರನ್ನು ಸ್ತುತಿಸುವದು ಒಳ್ಳೇದೂ ಸಂತೋಷಕರವೂ ಆಗಿದೆ; ಆತನನ್ನು ಕೀರ್ತಿಸುವದು ಯುಕ್ತವಾಗಿದೆ.

2 ಯೆಹೋವನು ಯೆರೂಸಲೇಮನ್ನು ಕಟ್ಟಿಸುತ್ತಿದ್ದಾನೆ; ಚದರಿಹೋಗಿದ್ದ ಇಸ್ರಾಯೇಲ್ಯರನ್ನು ಕೂಡಿಸುತ್ತಿದ್ದಾನೆ.

3 ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ.

4 ಆತನು ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ ಪ್ರತಿಯೊಂದಕ್ಕೆ ಹೆಸರಿಟ್ಟಿದ್ದಾನೆ.

5 ನಮ್ಮ ಕರ್ತನು ದೊಡ್ಡವನೂ ಪರಾಕ್ರವಿುಯೂ ಆಗಿದ್ದಾನೆ; ಆತನ ಜ್ಞಾನವು ಅಪರಿವಿುತವಾಗಿದೆ.

6 ಯೆಹೋವನು ದೀನರಿಗೆ ಆಧಾರವಾಗಿದ್ದಾನೆ; ದುಷ್ಟರನ್ನು ನೆಲಕ್ಕೆ ಹತ್ತಿಸಿಬಿಡುತ್ತಾನೆ.

7 ಯೆಹೋವನಿಗೆ ಕೃಜ್ಞತಾಸ್ತುತಿಮಾಡಿರಿ; ಕಿನ್ನರಿಯೊಡನೆ ನಮ್ಮ ದೇವರನ್ನು ಕೊಂಡಾಡಿರಿ.

8 ಆತನು ಆಕಾಶದಲ್ಲಿ ಮೋಡಗಳನ್ನು ಕವಿಸುತ್ತಾನೆ; ಭೂವಿುಗೋಸ್ಕರ ಮಳೆಯನ್ನು ಸಿದ್ಧಮಾಡುತ್ತಾನೆ; ಬೆಟ್ಟಗಳಲ್ಲಿ ಹುಲ್ಲನ್ನು ಬೆಳಸುತ್ತಾನೆ.

9 ಆತನು ಪಶುಗಳಿಗೂ ಕೂಗುತ್ತಿರುವ ಕಾಗೇಮರಿಗಳಿಗೂ ಬೇಕಾದ ಆಹಾರಕೊಡುತ್ತಾನೆ.

10 ಕುದುರೆಯ ಶಕ್ತಿಯಲ್ಲಿ ಆತನಿಗೆ ಇಷ್ಟವಿಲ್ಲ; ಆಳಿನ ತೊಡೆಯ ಬಲವನ್ನು ಮೆಚ್ಚುವದಿಲ್ಲ.

11 ಯೆಹೋವನು ಆನಂದಿಸುವದು ತನ್ನ ಕೃಪೆಯನ್ನು ನಿರೀಕ್ಷಿಸುವ ಭಕ್ತರಲ್ಲೇ.

12 ಯೆರೂಸಲೇಮೇ, ಯೆಹೋವನನ್ನು ಕೀರ್ತಿಸು; ಚೀಯೋನೇ, ನಿನ್ನ ದೇವರನ್ನು ಸ್ತುತಿಸು.

13 ಆತನು ನಿನ್ನ ಹೆಬ್ಬಾಗಲುಗಳ ಅಗುಳಿಗಳನ್ನು ಬಲಪಡಿಸಿದ್ದಾನೆ; ನಿನ್ನ ಮಕ್ಕಳನ್ನು ಆಶೀರ್ವದಿಸಿದ್ದಾನೆ.

14 ಆತನು ನಿನ್ನ ಪ್ರಾಂತದೊಳಗೆ ಸೌಭಾಗ್ಯವನ್ನುಂಟುಮಾಡುತ್ತಾನೆ; ಶ್ರೇಷ್ಠವಾದ ಗೋದಿಯಿಂದ ನಿನ್ನನ್ನು ತೃಪ್ತಿಗೊಳಿಸುತ್ತಾನೆ.

15 ತನ್ನ ನುಡಿಯನ್ನು ಭೂಲೋಕಕ್ಕೆ ಕಳುಹಿಸುತ್ತಾನೆ; ಆತನ ವಾಕ್ಯವು ಬಹುವೇಗಶಾಲಿಯಾಗಿದೆ.

16 ಉಣ್ಣೆಯಂತಿರುವ ಹಿಮವನ್ನು ಬೀಳಿಸುತ್ತಾನೆ; ಇಬ್ಬನಿಯನ್ನು ಬೂದಿಯಂತೆ ಹರವುತ್ತಾನೆ.

17 ರೊಟ್ಟೀತುಂಡುಗಳಂತಿರುವ ಆನೆಕಲ್ಲುಗಳನ್ನು ಸುರಿಸುತ್ತಾನೆ; ಆತನು ಚಳಿಯನ್ನು ಬರಮಾಡಲು ಅದನ್ನು ಸಹಿಸುವವರು ಯಾರು?

18 ಆತನು ಅಪ್ಪಣೆಕೊಡಲು ಅವು ಕರಗುತ್ತವೆ; ತನ್ನ ಗಾಳಿಯನ್ನು ಬೀಸಮಾಡಲು ನೀರು ಹರಿಯುತ್ತದೆ.

19 ಆತನು ತನ್ನ ವಾಕ್ಯವನ್ನು ಯಾಕೋಬ್ಯರಿಗೆ ತಿಳಿಸುತ್ತಾನೆ; ತನ್ನ ನಿಯಮವಿಧಿಗಳನ್ನು ಇಸ್ರಾಯೇಲ್ಯರಿಗೆ ಪ್ರಕಟಿಸುತ್ತಾನೆ.

20 ಬೇರೆ ಯಾವ ಜನಾಂಗದವರಿಗೂ ಆತನು ಹೀಗೆ ಮಾಡಲಿಲ್ಲ; ಆತನ ನ್ಯಾಯವಿಧಿಗಳನ್ನು ಅವರು ಅರಿಯರು. ಯಾಹುವಿಗೆ ಸ್ತೋತ್ರ!

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು