ಕೀರ್ತನೆಗಳು 145 - ಕನ್ನಡ ಸತ್ಯವೇದವು J.V. (BSI)ಕೃಪಾಪ್ರಭಾವಭರಿತನಾಗಿರುವ ಯೆಹೋವನನ್ನು ಕೊಂಡಾಡುವದು. ದಾವೀದನ ಕೀರ್ತನೆ 1 ನನ್ನ ದೇವರೇ, ಒಡೆಯನೇ, ನಿನ್ನನ್ನು ಘನಪಡಿಸುವೆನು; ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡುವೆನು. 2 ದಿನಂಪ್ರತಿ ನಿನ್ನನ್ನು ಕೀರ್ತಿಸುವೆನು; ನಿನ್ನ ನಾಮವನ್ನು ಯುಗಯುಗಾಂತರಗಳಲ್ಲಿಯೂ ಸ್ತುತಿಸುವೆನು. 3 ಯೆಹೋವನು ಮಹೋನ್ನತನೂ ಮಹಾಸ್ತುತಿಪಾತ್ರನೂ ಆಗಿದ್ದಾನೆ; ಆತನ ಮಹತ್ತು ಅಪಾರವಾದದ್ದು. 4 ಜನರು ಪಾರಂಪರ್ಯವಾಗಿ ನಿನ್ನ ಕೃತ್ಯಗಳನ್ನು ಹೊಗಳುವರು; ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವರು. 5 ನಾನು ನಿನ್ನ ಮಹಾಪ್ರಭಾವಯುಕ್ತವಾದ ಮಹಿಮೆಯನ್ನೂ ಅದ್ಭುತಕಾರ್ಯಗಳನ್ನೂ ಧ್ಯಾನಿಸುವೆನು. 6 ಮನುಷ್ಯರು ನಿನ್ನ ಭಯಂಕರಕೃತ್ಯಗಳಲ್ಲಿ ಕಂಡುಬಂದ ಪ್ರತಾಪವನ್ನು ಕೊಂಡಾಡುವರು. ನಾನು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವೆನು. 7 ಜನರು ನಿನ್ನ ಮಹೋಪಕಾರವನ್ನು ನೆನಪಿನಲ್ಲಿಟ್ಟುಕೊಂಡು ಪ್ರಕಟಿಸುವರು; ನಿನ್ನ ನೀತಿಯನ್ನು ಹೊಗಳುವರು. 8 ಯೆಹೋವನು ದಯೆಯೂ ಕನಿಕರವೂ ಉಳ್ಳವನು; ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ. 9 ಯೆಹೋವನು ಸರ್ವೋಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ. 10 ಯೆಹೋವನೇ, ನಿನ್ನ ಸೃಷ್ಟಿಯೆಲ್ಲವು ನಿನ್ನನ್ನು ಸ್ತುತಿಸುವದು; ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು. 11 ಅವರು ನಿನ್ನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು; ನಿನ್ನ ಪ್ರತಾಪವನ್ನು ವರ್ಣಿಸುವರು. 12 ಹೀಗೆ ಮಾನವರು ನಿನ್ನ ಶೂರಕೃತ್ಯಗಳನ್ನೂ ನಿನ್ನ ರಾಜ್ಯದ ಮಹಾಪ್ರಭಾವವನ್ನೂ ಗ್ರಹಿಸಿಕೊಳ್ಳುವರು. 13 ನಿನ್ನ ರಾಜ್ಯವು ಶಾಶ್ವತವಾಗಿದೆ; ನಿನ್ನ ಆಳ್ವಿಕೆಯು ತಲತಲಾಂತರಕ್ಕೂ ಇರುವದು. 14 ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ. 15 [ಯೆಹೋವನೇ,] ಎಲ್ಲಾ ಜೀವಿಗಳ ಕಣ್ಣುಗಳು ನಿನ್ನನ್ನೇ ನೋಡುತ್ತವೆ; ನೀನು ಅವುಗಳಿಗೆ ಹೊತ್ತುಹೊತ್ತಿಗೆ ಆಹಾರಕೊಡುತ್ತೀ. 16 ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ. 17 ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು; ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆತೋರಿಸುವವನು. 18 ಯೆಹೋವನಿಗೆ ಮೊರೆಯಿಡುವವರು ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ. 19 ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ. 20 ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ; ಆದರೆ ಎಲ್ಲಾ ದುಷ್ಟರನ್ನು ಸಂಹರಿಸುತ್ತಾನೆ. 21 ನನ್ನ ಬಾಯಿ ಯೆಹೋವನನ್ನು ಕೀರ್ತಿಸುವದು; ಎಲ್ಲಾ ಜೀವಿಗಳು ಆತನ ಪರಿಶುದ್ಧ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡಲಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India