Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 143 - ಕನ್ನಡ ಸತ್ಯವೇದವು J.V. (BSI)


ಶಿಕ್ಷಾರಕ್ಷಣೆಗಳಿಗಾಗಿ ಪ್ರಾರ್ಥಿಸುವದು ದಾವೀದನ ಕೀರ್ತನೆ
( ಕೀರ್ತ. 140 )

1 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಆಲಿಸು; ನನ್ನ ಬಿನ್ನಹಕ್ಕೆ ಕಿವಿಗೊಡು; ನಿನ್ನ ನೀತಿಸತ್ಯತೆಗಳಿಗನುಸಾರವಾಗಿ ಸದುತ್ತರವನ್ನು ದಯಪಾಲಿಸು.

2 ನಿನ್ನ ಸೇವಕನನ್ನು ವಿಚಾರಣೆಗೆ ಗುರಿಮಾಡಬೇಡ; ನಿನ್ನ ಸನ್ನಿಧಿಯಲ್ಲಿ ಯಾವ ಜೀವಿಯೂ ನೀತಿವಂತನಲ್ಲ.

3 ವೈರಿಯು ನನ್ನ ಪ್ರಾಣವನ್ನು ಹಿಂಸಿಸಿದ್ದಾನೆ; ಜೀವವನ್ನು ನೆಲಕ್ಕೆ ಹಾಕಿ ಜಜ್ಜಿದ್ದಾನೆ. ಕಾರ್ಗತ್ತಲೆಯಲ್ಲಿ ನನ್ನನ್ನು ಹಾಕಿದ್ದಾನೆ; ಬಹು ಕಾಲದಿಂದ ಸತ್ತವರಂತಿದ್ದೇನೆ.

4 ನನ್ನ ಆತ್ಮವು ಕುಂದಿಹೋಗಿದೆ; ನನ್ನ ಮನಸ್ಸು ಬೆರಗಾಗಿದೆ.

5 ಹಳೇ ದಿನಗಳನ್ನು ನೆನಸಿಕೊಳ್ಳುತ್ತೇನೆ; ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ.

6 ಕೈಯೊಡ್ಡಿ ಬೇಡುತ್ತೇನೆ; ಒಣನೆಲವು ನೀರಿಗಾಗಿ ಹೇಗೋ ಹಾಗೆಯೇ ನನ್ನ ಆತ್ಮವು ನಿನಗಾಗಿ ತವಕಪಡುತ್ತದೆ. ಸೆಲಾ.

7 ಯೆಹೋವನೇ, ಬೇಗನೆ ಸದುತ್ತರವನ್ನು ದಯಪಾಲಿಸು; ನನ್ನ ಆತ್ಮವು ಕುಂದಿಹೋಗಿದೆ. ನೀನು ವಿಮುಖನಾದರೆ ಸಮಾಧಿಯಲ್ಲಿ ಸೇರಿದವರಿಗೆ ನಾನು ಸಮಾನನಾಗಿರುವೆನು.

8 ಹೊತ್ತಾರೆ ನಿನ್ನ ಕೃಪೆಯು ನನಗೆ ಪ್ರಕಟವಾಗಲಿ; ನಿನ್ನಲ್ಲಿ ಭರವಸವಿಟ್ಟಿದ್ದೇನಲ್ಲಾ. ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು; ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ.

9 ಯೆಹೋವನೇ, ನಿನ್ನನ್ನೇ ಮರೆಹೊಕ್ಕಿದ್ದೇನೆ; ಶತ್ರುಗಳಿಂದ ನನ್ನನ್ನು ಬಿಡಿಸು.

10 ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು; ನನ್ನ ದೇವರು ನೀನಲ್ಲವೋ? ಶುಭಕಾರಿಯಾಗಿರುವ ನಿನ್ನ ಆತ್ಮನು ನನ್ನನ್ನು ಮಟ್ಟನೆಲದಲ್ಲಿ ನಡಿಸಲಿ.

11 ಯೆಹೋವನೇ, ನಿನ್ನ ಹೆಸರಿನ ನಿವಿುತ್ತ ನನ್ನನ್ನು ಉಜ್ಜೀವಿಸಮಾಡು; ನಿನ್ನ ನೀತಿಗನುಸಾರವಾಗಿ ನನ್ನ ಪ್ರಾಣವನ್ನು ವಿಪತ್ತಿನಿಂದ ಬಿಡಿಸು.

12 ನನಗೆ ಕೃಪೆತೋರಿಸಿ ನನ್ನ ವೈರಿಗಳನ್ನು ಖಂಡಿಸಿಬಿಡು. ನನ್ನ ಪ್ರಾಣಕಂಟಕರನ್ನೆಲ್ಲಾ ಕಡಿದುಹಾಕು; ನಾನು ನಿನ್ನ ಸೇವಕನಲ್ಲವೇ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು