ಕೀರ್ತನೆಗಳು 141 - ಕನ್ನಡ ಸತ್ಯವೇದವು J.V. (BSI)ಕೆಡುಕರ ಬಲಾತ್ಕಾರದುಷ್ಪ್ರೇರಣೆಗಳಿಗೆ ತಪ್ಪಿಸಬೇಕೆಂಬ ಪ್ರಾರ್ಥನೆ ದಾವೀದನ ಕೀರ್ತನೆ ( ಕೀರ್ತ. 140 ) 1 ಯೆಹೋವನೇ, ಮೊರೆಯಿಡುತ್ತೇನೆ; ಬೇಗನೆ ಬಾ. ನಾನು ಮೊರೆಯಿಡುವಾಗ ನನ್ನ ಕೂಗನ್ನು ಲಾಲಿಸು. 2 ನನ್ನ ಪ್ರಾರ್ಥನೆಯು ಧೂಪದಂತೆಯೂ ನಾನು ಕೈಯೆತ್ತುವದು ಸಂಧ್ಯಾನೈವೇದ್ಯದಂತೆಯೂ ನಿನಗೆ ಸಮರ್ಪಕವಾಗಲಿ. 3 ಯೆಹೋವನೇ, ನನ್ನ ಬಾಯಿಗೆ ಕಾವಲಿರಿಸು; ನನ್ನ ತುಟಿಗಳೆಂಬ ಕದವನ್ನು ಕಾಯಿ. 4 ನನ್ನ ಹೃದಯವು ದುರಾಚಾರವನ್ನು ಮೆಚ್ಚದಂತೆಯೂ ನಾನು ದುಷ್ಟರೊಡನೆ ಕೂಡಿ ಕೆಟ್ಟ ಕೆಲಸಗಳನ್ನು ನಡಿಸದಂತೆಯೂ ನನ್ನನ್ನು ಕಾಪಾಡು. ಅವರ ಮೃಷ್ಟಾನ್ನವು ನನಗೆ ಬೇಡವೇ ಬೇಡ. 5 ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗುಪಕಾರ; ಅವರು ನನ್ನನ್ನು ಶಿಕ್ಷಿಸಲಿ, ಅದು ನನ್ನ ತಲೆಗೆ ಎಣ್ಣೆಯಂತಿದೆ; ನನ್ನ ತಲೆಯು ಅದನ್ನು ಬೇಡವೆನ್ನದಿರಲಿ. ಆದರೆ ದುಷ್ಟರ ಕೆಟ್ಟತನಕ್ಕೆ ವಿರೋಧವಾಗಿ ದೇವರನ್ನು ಪ್ರಾರ್ಥಿಸುತ್ತಿರುವೆನು. 6 ಅವರ ಪ್ರಮುಖರು ಕಡುಬಂಡೆಯಿಂದ ಕೆಳಕ್ಕೆ ದೊಬ್ಬಲ್ಪಟ್ಟ ಮೇಲೆ ಜನರು ನನ್ನ ಮಾತುಗಳಿಗೆ ಕಿವಿಗೊಡುವರು; ಅವು ಅವರಿಗೆ ಚೆನ್ನಾಗಿರುವವು. 7 ಒಬ್ಬನು ಹೊಲವನ್ನು ಉತ್ತು ಹೆಂಟೆಗಳನ್ನು ಒಡೆದು ಚದರಿಸುವ ಪ್ರಕಾರವೇ ನಮ್ಮ ಎಲುಬುಗಳು ಪಾತಾಳದ್ವಾರದಲ್ಲಿ ಚದರಿಸಲ್ಪಟ್ಟಿರುತ್ತವೆ. 8 ಕರ್ತನೇ, ಯೆಹೋವನೇ, ನನ್ನ ದೃಷ್ಟಿ ನಿನ್ನಲ್ಲಿದೆ; ನಿನ್ನನ್ನು ಆಶ್ರಯಿಸಿಕೊಂಡಿದ್ದೇನೆ, ನನ್ನ ಪ್ರಾಣವನ್ನು ಮರಣಕ್ಕೆ ಒಪ್ಪಿಸಬೇಡ. 9 ಕೆಡುಕರು ಒಡ್ಡಿದ ಉರುಲಿನಲ್ಲಿ ಸಿಕ್ಕಿಬೀಳದಂತೆ ನನ್ನನ್ನು ಕಾಪಾಡು; ಅವರಿಟ್ಟ ಬೋನಿಗೆ ನನ್ನನ್ನು ತಪ್ಪಿಸು. 10 ದುಷ್ಟರು ತಮ್ಮ ಬಲೆಯಲ್ಲಿ ತಾವೇ ಬಿದ್ದು ಹೋಗಲಿ; ಆಗಲೇ ನಾನು ತಪ್ಪಿಸಿಕೊಳ್ಳುವೆನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India