ಕೀರ್ತನೆಗಳು 140 - ಕನ್ನಡ ಸತ್ಯವೇದವು J.V. (BSI)ಶತ್ರುಪೀಡಿತನ ಪ್ರಾರ್ಥನೆ ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು; ದಾವೀದನ ಕೀರ್ತನೆ ( ಕೀರ್ತ. 7 , 35 , 64 , 141—143 ) 1 ಯೆಹೋವನೇ, ಕೆಡುಕರಿಂದ ನನ್ನನ್ನು ಬಿಡಿಸು; ಬಲಾತ್ಕಾರಿಗಳಿಗೆ ತಪ್ಪಿಸಿ ಕಾಪಾಡು. 2 ಅವರು ಕೇಡು ಕಲ್ಪಿಸುತ್ತಾರೆ; ಯಾವಾಗಲೂ ಜಗಳವೆಬ್ಬಿಸುತ್ತಾರೆ. 3 ತಮ್ಮ ನಾಲಿಗೆಯನ್ನು ಸರ್ಪದಂತೆ ಹದಮಾಡಿದ್ದಾರೆ; ಅವರ ತುಟಿಗಳ ಹಿಂದೆ ಹಾವಿನ ವಿಷವದೆ. ಸೆಲಾ. 4 ಯೆಹೋವನೇ, ದುಷ್ಟರ ಕೈಗೆ ಸಿಕ್ಕದಂತೆ ನನ್ನನ್ನು ಕಾಪಾಡು; ಬಲಾತ್ಕಾರಿಗಳಿಗೆ ತಪ್ಪಿಸಿ ರಕ್ಷಿಸು. ಅವರು ನನ್ನ ಕಾಲುಗಳನ್ನು ಎಡವಿಸಿಬಿಡಬೇಕೆಂದು ಯೋಚಿಸಿದ್ದಾರೆ. 5 ಗರ್ವಿಷ್ಠರು ನನಗೋಸ್ಕರ ಗುಪ್ತಸ್ಥಳದಲ್ಲಿ ಉರುಲನ್ನೂ ಪಾಶಗಳನ್ನೂ ಒಡ್ಡಿದ್ದಾರೆ; ದಾರಿಯ ಮಗ್ಗುಲಲ್ಲಿ ಬಲೆಹಾಸಿದ್ದಾರೆ; ನನಗಾಗಿ ಬೋನಿಟ್ಟಿದ್ದಾರೆ. ಸೆಲಾ. 6 ನಾನು ಯೆಹೋವನಿಗೆ - ನೀನೇ ನನ್ನ ದೇವರು; ಯೆಹೋವನೇ, ನನ್ನ ವಿಜ್ಞಾಪನೆಗೆ ಕಿವಿಗೊಡು; 7 ಕರ್ತನೇ, ಯೆಹೋವನೇ, ನನ್ನ ಆಶ್ರಯದುರ್ಗವೇ, ಯುದ್ಧಸಮಯದಲ್ಲಿ ನೀನೇ ನನ್ನ ಶಿರಸ್ತ್ರಾಣ; 8 ಯೆಹೋವನೇ, ದುಷ್ಟರು ತಮ್ಮನ್ನು ಹೆಚ್ಚಿಸಿಕೊಳ್ಳದ ಹಾಗೆ ಅವರ ಆಶೆಗಳನ್ನು ನೆರವೇರಿಸಬೇಡ; ಅವರ ಕುಯುಕ್ತಿಯನ್ನು ಸಾಗಗೊಡಬೇಡ ಎಂದು ಹೇಳುತ್ತೇನೆ. ಸೆಲಾ. 9 ನನ್ನನ್ನು ಸುತ್ತಿಕೊಂಡಿರುವವರ ತುಟಿಗಳ ಕೇಡು ಅವರ ತಲೆಯ ಮೇಲೇ ಬರಲಿ; 10 ಅವರ ಮೇಲೆ ಕೆಂಡಗಳು ಸುರಿಯಲಿ; ಅವರು ಅಗ್ನಿಕುಂಡದೊಳಕ್ಕೂ ದೊಡ್ಡ ಮಡುವಿನೊಳಕ್ಕೂ ದೊಬ್ಬಲ್ಪಟ್ಟು ತಿರಿಗಿ ಏಳದಿರಲಿ. 11 ಚಾಡಿಗಾರನು ದೇಶದಲ್ಲಿ ಉಳಿಯನು; ಕೇಡು ಬಲಾತ್ಕಾರಿಯನ್ನು ಹಿಂದಟ್ಟಿ ಕೆಡವಿಬಿಡುವದು. 12 ಯೆಹೋವನು ದೀನರ ವ್ಯಾಜ್ಯವನ್ನು ನಡಿಸುವನೆಂತಲೂ ಬಡವರ ನ್ಯಾಯವನ್ನು ಸ್ಥಾಪಿಸುವನೆಂತಲೂ ಬಲ್ಲೆನು. 13 ನಿಶ್ಚಯವಾಗಿ ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು; ಯಥಾರ್ಥರು ನಿನ್ನ ಸನ್ನಿಧಿಯಲ್ಲಿ ಬದುಕುವರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India