ಕೀರ್ತನೆಗಳು 139 - ಕನ್ನಡ ಸತ್ಯವೇದವು J.V. (BSI)ದೇವರ ಸರ್ವಜ್ಞತ್ವವೂ ಸರ್ವವ್ಯಾಪಕತ್ವವೂ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ದಾವೀದನ ಕೀರ್ತನೆ 1 ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ; 2 ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ; ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ; 3 ನಾನು ನಡೆಯುವದನ್ನೂ ಮಲಗುವದನ್ನೂ ಶೋಧಿಸಿ ಗ್ರಹಿಸಿಕೊಳ್ಳುತ್ತೀ; ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ. 4 ಯೆಹೋವನೇ, ನನ್ನ ನಾಲಿಗೆಯ ಮಾತುಗಳಲ್ಲಿ ನೀನು ಅರಿಯದೆ ಇರುವಂಥದು ಒಂದೂ ಇಲ್ಲ. 5 ಸುತ್ತಲೂ ನನ್ನನ್ನು ಆವರಿಸಿ ನಿನ್ನ ಕೈಯನ್ನು ನನ್ನ ಮೇಲೆ ಇಟ್ಟಿದ್ದೀ. 6 ಇಂಥ ಜ್ಞಾನವು ನನಗೆ ಬಹು ಆಶ್ಚರ್ಯವಾಗಿದೆ; ಅದು ಉನ್ನತವಾದದ್ದು, ನನಗೆ ನಿಲುಕುವದಿಲ್ಲ. 7 ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಳ್ಳುವಂತೆ ಎಲ್ಲಿಗೆ ಹೋಗಲಿ? ನಿನ್ನ ಕಣ್ಣಿಗೆ ಮರೆಯಾಗುವಂತೆ ಎಲ್ಲಿಗೆ ಓಡಲಿ? 8 ಮೇಲಣ ಲೋಕಕ್ಕೆ ಏರಿಹೋದರೆ ಅಲ್ಲಿ ನೀನಿರುತ್ತೀ; ಪಾತಾಳಕ್ಕೆ ಹೋಗಿ ಮಲಗಿಕೊಂಡೇನಂದರೆ ಅಲ್ಲಿಯೂ ನೀನಿರುವಿ. 9 ಅರುಣನ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಿಹೋಗಿ ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡೇನಂದರೆ 10 ಅಲ್ಲಿಯೂ ನಿನ್ನ ಕೈ ನನ್ನನ್ನು ನಡಿಸುವದು; ನಿನ್ನ ಬಲಗೈ ನನ್ನನ್ನು ಹಿಡಿದಿರುವದು. 11 ಕಾರ್ಗತ್ತಲೆಯು ನನ್ನನ್ನು ಕವಿಯುವದು, ಹಗಲು ಹೋಗಿ ನನ್ನ ಸುತ್ತಲು ಇರುಳಾಗುವದು ಎಂದು ಹೇಳಿಕೊಂಡರೇನು? 12 ನಿನಗೆ ಕತ್ತಲೆಯು ಕತ್ತಲೆಯಲ್ಲ; ಇರುಳು ಹಗಲಾಗಿಯೇ ಇರುತ್ತದೆ; ಕತ್ತಲು ಬೆಳಕುಗಳೆರಡೂ ನಿನಗೆ ಒಂದೇ. 13 ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? 14 ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ. 15 ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ ಭೂಗರ್ಭದಲ್ಲಿ ರಚಿಸಲ್ಪಡುತ್ತಾ ಇದ್ದಾಗ ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ. 16 ನಾನು ಇನ್ನೂ ಕೇವಲ ಪಿಂಡವಾಗಿರುವಾಗ ನಿನ್ನ ಕಣ್ಣುಗಳು ನನ್ನನ್ನು ನೋಡಿದವು; ನನ್ನ ಆಯುಷ್ಕಾಲದ ಪ್ರಥಮದಿನವು ಪ್ರಾರಂಭವಾಗುವ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು. 17 ದೇವರೇ, ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ; ಅವುಗಳ ಒಟ್ಟು ಅಸಂಖ್ಯವಾಗಿದೆ. 18 ಅವುಗಳನ್ನು ಲೆಕ್ಕಿಸುವದಾದರೆ [ಸಮುದ್ರದ] ಮರಳಿಗಿಂತ ಹೆಚ್ಚಾಗಿವೆ. ನಾನು ಎಚ್ಚರವಾಗಲು ಮುಂಚಿನಂತೆಯೇ ನಿನ್ನ ಬಳಿಯಲ್ಲಿದ್ದೇನೆ. 19 ಯೆಹೋವನೇ, ನೀನು ದುಷ್ಟರನ್ನು ಸಂಹರಿಸಿಬಿಟ್ಟರೆ ಎಷ್ಟೋ ಒಳ್ಳೇದು. ಕೊಲೆಪಾತಕರೇ, ನನ್ನಿಂದ ತೊಲಗಿಹೋಗಿರಿ. 20 [ದೇವರೇ,] ಅವರು ನಿನ್ನ ಶತ್ರುಗಳು; ಅಯೋಗ್ಯಕಾರ್ಯಕ್ಕಾಗಿ ನಿನ್ನ ಹೆಸರೆತ್ತುತ್ತಾರೆ, ಸುಳ್ಳಾಣೆಯಿಡುತ್ತಾರೆ. 21 ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನು ದ್ವೇಷಿಸುತ್ತೇನಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವದಿಲ್ಲವೋ? 22 ನಾನು ಅವರನ್ನು ಸಂಪೂರ್ಣವಾಗಿ ಹಗೆಮಾಡುತ್ತೇನೆ; ಅವರು ನನಗೂ ವೈರಿಗಳೇ ಆಗಿದ್ದಾರೆ. 23 ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. 24 ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India