ಕೀರ್ತನೆಗಳು 137 - ಕನ್ನಡ ಸತ್ಯವೇದವು J.V. (BSI)ಸೆರೆಯವರ ಪ್ರಲಾಪ ( 2 ಪೂರ್ವ. 36 ) 1 ನಾವು ಬಾಬೆಲ್ ದೇಶದ ನದಿಗಳ ಬಳಿಯಲ್ಲಿ ಕೂತುಕೊಂಡು ಚೀಯೋನನ್ನು ನೆನಸಿ ಅತ್ತೆವು. 2 ಆ ದೇಶದ ನೀರವಂಜಿ ಮರಗಳಿಗೆ ನಮ್ಮ ಕಿನ್ನರಿಗಳನ್ನು ತೂಗಹಾಕಿದೆವು. 3 ನಮ್ಮನ್ನು ಸೆರೆಹಿಡಿದು ಪೀಡಿಸುತ್ತಿದ್ದವರು ನಮಗೆ - ನೀವು ಚೀಯೋನಿನ ಗೀತಗಳಲ್ಲಿ ಒಂದನ್ನು ನಮ್ಮ ವಿನೋದಕ್ಕಾಗಿ ಹಾಡಿರಿ ಎಂದು ಹೇಳುತ್ತಿದ್ದರು. 4 ನಾವು ಪರದೇಶದಲ್ಲಿ ಯೆಹೋವಗೀತಗಳನ್ನು ಹಾಡುವದು ಹೇಗೆ? 5 ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ ನನ್ನ ಬಲಗೈ ಮರೆತುಹೋಗಲಿ. 6 ಯೆರೂಸಲೇಮೇ, ನಾನು ನಿನ್ನನ್ನು ನೆನಸದಿದ್ದರೆ, ಎಲ್ಲಾದಕ್ಕಿಂತ ಹೆಚ್ಚಾಗಿ ನಾನು ನಿನ್ನಲ್ಲಿ ಆನಂದಿಸದಿದ್ದರೆ, ನನ್ನ ನಾಲಿಗೆಯು ಸೇದಿಹೋಗಲಿ. 7 ಯೆಹೋವನೇ, ಎದೋಮ್ಯರ ಹಾನಿಗಾಗಿ ಯೆರೂಸಲೇವಿುನ ನಾಶನದಿನವನ್ನು ನೆನಪುಮಾಡಿಕೋ. ಅವರು - ಅದನ್ನು ಹಾಳುಮಾಡಿರಿ, ಅಸ್ತಿವಾರಸಹಿತ ಹಾಳುಮಾಡಿರಿ ಎಂದು ಹೇಳಿದರಲ್ಲಾ. 8 ಹಾಳಾಗುವದಕ್ಕಿರುವ ಬಾಬೆಲ್ ಪಟ್ಟಣವೇ, ನೀನು ನಮಗೆ ಮಾಡಿದ್ದಕ್ಕೆ ಮುಯ್ಯಿಸಲ್ಲಿಸುವವನು ಧನ್ಯನು. 9 ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಭಾಗ್ಯಹೊಂದಲಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India