ಕೀರ್ತನೆಗಳು 135 - ಕನ್ನಡ ಸತ್ಯವೇದವು J.V. (BSI)ಸೃಷ್ಟಿಕರ್ತನೂ ಪರಿಪಾಲಕನೂ ಆಗಿರುವ ಏಕದೇವರಿಗೆ ಸ್ತೋತ್ರ ( ಕೀರ್ತ. 136 ) 1 ಯಾಹುವಿಗೆ ಸ್ತೋತ್ರ! ಯೆಹೋವನಾಮವನ್ನು ಸ್ತುತಿಸಿರಿ. ಯೆಹೋವನ ಸೇವಕರೇ, 2 ಯೆಹೋವನ ಮಂದಿರದಲ್ಲಿಯೂ ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆಮಾಡುವವರೇ, ಆತನನ್ನು ಕೀರ್ತಿಸಿರಿ. 3 ಯಾಹುವಿಗೆ ಸ್ತೋತ್ರ! ಯೆಹೋವನು ಒಳ್ಳೆಯವನು. ಆತನ ನಾಮವನ್ನು ಕೊಂಡಾಡಿರಿ; ಅದು ಮನೋಹರವಾಗಿದೆ. 4 ಯಾಹುವು ಯಾಕೋಬನ ವಂಶದವರಾದ ಇಸ್ರಾಯೇಲ್ಯರನ್ನು ಸ್ವಕೀಯಜನವನ್ನಾಗಿ ಆದುಕೊಂಡನಲ್ಲಾ. 5 ಯೆಹೋವನು ದೊಡ್ಡವನೆಂದೂ ನಮ್ಮ ಕರ್ತನು ಎಲ್ಲಾ ದೇವರುಗಳಿಗಿಂತ ಹೆಚ್ಚಿನವನೆಂದೂ ತಿಳಿದಿದ್ದೇನೆ. 6 ಯೆಹೋವನು ಭೂವಿುಯಲ್ಲಿಯೂ ಆಕಾಶದಲ್ಲಿಯೂ ಸಮುದ್ರಗಳಲ್ಲಿಯೂ ಬೇರೆ ಎಲ್ಲಾ ಜಲರಾಶಿಗಳಲ್ಲಿಯೂ ತನಗೆ ಬೇಕಾದದ್ದನ್ನು ಮಾಡುತ್ತಾನೆ. 7 ಆತನು ಭೂವಿುಯ ಕಟ್ಟಕಡೆಯಿಂದ ಮೋಡಗಳನ್ನು ಏರಮಾಡುತ್ತಾನೆ; ಮಳೆಗೋಸ್ಕರ ವಿುಂಚನ್ನು ಹೊಳೆಯಮಾಡುತ್ತಾನೆ; ತನ್ನ ಉಗ್ರಾಣದಿಂದ ಗಾಳಿಯನ್ನು ಬೀಸಮಾಡುತ್ತಾನೆ. 8 ಐಗುಪ್ತದ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ ಚೊಚ್ಚಲುಗಳನ್ನೆಲ್ಲಾ ಸಂಹರಿಸಿದನು. 9 ಐಗುಪ್ತವೇ, ಆತನು ನಿನ್ನ ಮಧ್ಯದಲ್ಲಿ ಫರೋಹನಿಗೂ ಅವನ ಸೇವಕರಿಗೂ ವಿರೋಧವಾಗಿ ಅದ್ಭುತಗಳನ್ನೂ ಮಹತ್ಕಾರ್ಯಗಳನ್ನೂ ನಡಿಸಿದನು. 10 ಆತನು ದೊಡ್ಡ ಜನಾಂಗಗಳನ್ನು ಹೊಡೆದುಬಿಟ್ಟನು; ಬಲಿಷ್ಠರಾಜರನ್ನು ಕೊಂದುಹಾಕಿದನು. 11 ಅವರಲ್ಲಿ ಅಮೋರಿಯರ ಅರಸನಾದ ಸೀಹೋನನೂ ಬಾಷಾನಿನ ಅರಸನಾದ ಓಗನೂ ಇದ್ದರು. ಕಾನಾನ್‍ದೇಶದ ಎಲ್ಲಾ ರಾಜ್ಯಗಳನ್ನು ನಿರ್ಮೂಲ ಮಾಡಿದನು. 12 ಅವರ ದೇಶವನ್ನು ಇಸ್ರಾಯೇಲ್ಯರಿಗೆ ಕೊಟ್ಟನು; ಆತನ ಪ್ರಜೆಗೆ ಅದು ಸ್ವಾಸ್ತ್ಯವಾಯಿತು. 13 ಯೆಹೋವನೇ, ನಿನ್ನ ನಾಮವು ಶಾಶ್ವತವಾದದ್ದು; ಯೆಹೋವನೇ, ನೀನು ತಲತಲಾಂತರಕ್ಕೂ ಸ್ಮರಿಸಲ್ಪಡುತ್ತೀ. 14 ನಿಜವಾಗಿ ಯೆಹೋವನು ತನ್ನ ಪ್ರಜೆಯ ನ್ಯಾಯವನ್ನು ಸ್ಥಾಪಿಸುವನು; ತನ್ನ ಸೇವಕರನ್ನು ಕನಿಕರಿಸುವನು. 15 ಅನ್ಯಜನಗಳ ವಿಗ್ರಹಗಳು ಬೆಳ್ಳಿಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ. 16 ಅವುಗಳಿಗೆ ಬಾಯಿದ್ದರೂ ಮಾತಾಡುವದಿಲ್ಲ; ಕಣ್ಣಿದ್ದರೂ ನೋಡುವದಿಲ್ಲ; 17 ಕಿವಿಯಿದ್ದರೂ ಕೇಳುವದಿಲ್ಲ; ಇದಲ್ಲದೆ ಅವುಗಳ ಬಾಯಲ್ಲಿ ಶ್ವಾಸವೇ ಇಲ್ಲ. 18 ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ. 19 ಇಸ್ರಾಯೇಲನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ; ಆರೋನನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ; 20 ಲೇವಿಯ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ; ಯೆಹೋವನ ಭಕ್ತರೇ, ಯೆಹೋವನನ್ನು ಕೊಂಡಾಡಿರಿ. 21 ಯೆರೂಸಲೇವಿುನಲ್ಲಿ ವಾಸಿಸುವ ಯೆಹೋವನ ಕೀರ್ತಿಯು ಚೀಯೋನಿನಿಂದ ಹೊರಗೂ ಹಬ್ಬಲಿ. ಯಾಹುವಿಗೆ ಸ್ತೋತ್ರ! |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India