ಕೀರ್ತನೆಗಳು 132 - ಕನ್ನಡ ಸತ್ಯವೇದವು J.V. (BSI)ದಾವೀದನ ಮನೆತನದವರನ್ನು ಪುನಃಸ್ಥಾಪಿಸಬೇಕೆಂದು ಪ್ರಾರ್ಥಿಸುವದು ಯಾತ್ರಾಗೀತ ( ಕೀರ್ತ. 89 ; 2 ಸಮು. 7 ) 1 ಯೆಹೋವನೇ, ದಾವೀದನ ಹಿತಕ್ಕೋಸ್ಕರ ಅವನ ಶ್ರಮಗಳನ್ನು ನೆನಪುಮಾಡಿಕೋ. 2 ಯಾಕೋಬ್ಯರ ಶೂರನಾದ ಯೆಹೋವನಿಗಾಗಿ ಒಂದು ವಾಸಸ್ಥಾನವನ್ನು ಏರ್ಪಡಿಸುವ ತನಕ 3 ನಾನು ನನ್ನ ಮನೆಯೊಳಗೆ ಪ್ರವೇಶಿಸುವದಿಲ್ಲ, ಮಂಚವನ್ನು ಹತ್ತುವದಿಲ್ಲ, 4 ಕಣ್ಣುಗಳನ್ನು ಮುಚ್ಚುವದಿಲ್ಲ, ರೆಪ್ಪೆಗಳನ್ನು ಕೂಡಿಸುವದಿಲ್ಲ ಎಂದು 5 ಅವನು ಯಾಕೋಬ್ಯರ ಶೂರನಾದ ಯೆಹೋವನಿಗೆ ಪ್ರಮಾಣದಿಂದ ಹರಕೆಮಾಡಿಕೊಂಡನಲ್ಲಾ. 6 ಇಗೋ, ಅದು ಎಫ್ರಾತದಲ್ಲಿರುತ್ತದೆಂದು ಕೇಳಿದೆವು; ಯಹಾರ್ ಮೈದಾನದಲ್ಲಿ ನಮಗೆ ಸಿಕ್ಕಿತು. 7 ಬನ್ನಿರಿ, ಆತನ ಮಂದಿರಕ್ಕೆ ಹೋಗಿ ಆತನ ಪಾದಪೀಠದ ಮುಂದೆ ಅಡ್ಡಬೀಳೋಣ. 8 ಯೆಹೋವನೇ, ಎದ್ದು ನಿನ್ನ ಪ್ರತಾಪಯುಕ್ತವಾದ ಮಂಜೂಷದೊಡನೆ ನಿನ್ನ ವಾಸಸ್ಥಾನದಲ್ಲಿ ಸೇರೋಣವಾಗಲಿ. 9 ನಿನ್ನ ಯಾಜಕರು ನೀತಿಯೆಂಬ ವಸ್ತ್ರವನ್ನು ಹೊದ್ದುಕೊಳ್ಳಲಿ; ನಿನ್ನ ಭಕ್ತರು ಉತ್ಸಾಹಧ್ವನಿಮಾಡಲಿ. 10 ನಿನ್ನ ಸೇವಕನಾದ ದಾವೀದನನ್ನು ನೆನಪುಮಾಡಿಕೋ; ನಿನ್ನ ಅಭಿಷಿಕ್ತನನ್ನು ತಳ್ಳಿಬಿಡಬೇಡ. 11 ಯೆಹೋವನು ದಾವೀದನಿಗೆ ಮಾಡಿದ ಪ್ರಮಾಣವು ಸ್ಥಿರವಾಗಿದೆ; ಆತನು ಅದನ್ನು ಬದಲಿಸುವದಿಲ್ಲ - ನಿನ್ನ ಸಂತಾನದವರನ್ನು ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು; 12 ನಿನ್ನ ಮಕ್ಕಳು ನನ್ನ ನಿಬಂಧನೆಯನ್ನೂ ನಾನು ಆಜ್ಞಾಪಿಸಿದ ಕಟ್ಟಳೆಗಳನ್ನೂ ಕೈಕೊಂಡು ನಡೆಯುವದಾದರೆ ಅವರ ಮಕ್ಕಳು ನಿನ್ನ ಸಿಂಹಾಸನದಲ್ಲಿ ಸದಾಕಾಲ ಕೂತುಕೊಳ್ಳುವರು. 13 ನಿಶ್ಚಯವಾಗಿ ಯೆಹೋವನು ಚೀಯೋನನ್ನು ಅಪೇಕ್ಷಿಸಿ ತನ್ನ ನಿವಾಸಕ್ಕಾಗಿ ಆರಿಸಿಕೊಂಡಿದ್ದಾನೆ. 14 ಆತನು - ಇದು ನನ್ನ ಶಾಶ್ವತವಾಸಸ್ಥಾನ; ಇಲ್ಲೇ ಇರುವೆನು; ಇದು ನನಗೆ ಇಷ್ಟವು. 15 ಇದರ ಆದಾಯವನ್ನು ಆಶೀರ್ವದಿಸುವೆನು; ಇಲ್ಲಿಯ ಬಡವರನ್ನು ಆಹಾರದಿಂದ ತೃಪ್ತಿಗೊಳಿಸುವೆನು; 16 ಯಾಜಕರಿಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸುವೆನು; ಭಕ್ತರು ಉತ್ಸಾಹಧ್ವನಿಮಾಡುವರು. 17 ಇಲ್ಲಿಯೇ ದಾವೀದನ ಕೊಂಬು ಚಿಗುರುವಂತೆ ಮಾಡುವೆನು; ನನ್ನ ಅಭಿಷಿಕ್ತನ ದೀಪವು ಉರಿಯುತ್ತಲೇ ಇರಬೇಕೆಂದು ನೇವಿುಸಿದ್ದೇನೆ. 18 ಅವನ ವೈರಿಗಳನ್ನು ನಾಚಿಕೆಯೆಂಬ ವಸ್ತ್ರದಿಂದ ಹೊದಿಸುವೆನು; ಆದರೆ ಅವನ ಮೇಲೆ ಕಿರೀಟವು ಶೋಭಿಸುತ್ತಿರುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India