ಕೀರ್ತನೆಗಳು 12 - ಕನ್ನಡ ಸತ್ಯವೇದವು J.V. (BSI)ದುಷ್ಟಾಧಿಕಾರದಲ್ಲಿ ಭಕ್ತನು ಪ್ರಾರ್ಥಿಸುವದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಮಂದರಸ್ಥಾಯಿಯೊಡನೆ ಹಾಡತಕ್ಕದ್ದು; ದಾವೀದನ ಕೀರ್ತನೆ 1 ಯೆಹೋವನೇ, ರಕ್ಷಿಸು; ಭಕ್ತರು ಮುಗಿದು ಹೋಗಿದ್ದಾರೆ. ಜನರೊಳಗೆ ನಂಬಿಕೆಯುಳ್ಳವರು ಕಾಣಿಸುವದೇ ಇಲ್ಲ. 2 ಪ್ರತಿಯೊಬ್ಬರು ನೆರೆಯವರೊಡನೆ ಹುಸಿಯನ್ನಾಡುತ್ತಾರೆ. ಅವರು ವಂಚನೆಯ ತುಟಿಗಳಿಂದ ಹೊರಗೊಂದು ಒಳಗೊಂದು ಮಾತಾಡುತ್ತಾರೆ. 3 ಯೆಹೋವನು ವಂಚನೆಯ ತುಟಿಗಳನ್ನೂ ಬಡಾಯಿ ನಾಲಿಗೆಯನ್ನೂ ಕಡಿದುಬಿಡಲಿ. 4 ಅವರು - ನಮ್ಮ ಮಾತುಗಳಿಗೆ ತಡೆಯಿಲ್ಲವಲ್ಲಾ; ನಮ್ಮ ತುಟಿಗಳು ನಮ್ಮವೇ; ನಮಗೆ ಒಡೆಯನು ಯಾವನು ಎಂದು ಹೇಳಿಕೊಳ್ಳುತ್ತಾರಲ್ಲಾ. 5 ಯೆಹೋವನು - ಕುಗ್ಗಿದವರ ಬಾಧೆಯನ್ನು ನೋಡಿದ್ದೇನೆ; ಗತಿಯಿಲ್ಲದವರ ನರಳುವಿಕೆಯು ನನಗೆ ಕೇಳಿಸಿತು. ಈಗ ಎದ್ದು ಬಂದು ಅವರ ಇಷ್ಟಾರ್ಥವನ್ನು ನೆರವೇರಿಸಿ ಅವರನ್ನು ಸುರಕ್ಷಿತವಾಗಿ ಇರಿಸುವೆನು ಎಂದು ಹೇಳುತ್ತಾನೆ. 6 ಯೆಹೋವನ ಮಾತುಗಳು ಯಥಾರ್ಥವಾದವುಗಳೇ; ಅವು ಏಳು ಸಾರಿ ಪುಟಕ್ಕೆ ಹಾಕಿದ ಚೊಕ್ಕ ಬೆಳ್ಳಿಯೋಪಾದಿಯಲ್ಲಿವೆ. 7 ಯೆಹೋವನೇ, ದುಷ್ಟತ್ವಕ್ಕೆ ಆಳಿಕೆ ಬಂದು ಎಲ್ಲೆಲ್ಲೂ ನೀಚರೇ ತುಂಬಿಕೊಂಡಿದ್ದರೂ 8 ನೀನು ನಮ್ಮನ್ನು ಅವರಿಂದ ತಪ್ಪಿಸಿ ಕಾಪಾಡುವಿ; ಸದಾಕಾಲವೂ ನಮ್ಮನ್ನು ಕಾಯುವಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India