Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 118 - ಕನ್ನಡ ಸತ್ಯವೇದವು J.V. (BSI)


ಹಬ್ಬದ ಗೀತ
( ನೆಹೆ. 8.14-18 ; ಯೆಶಾ. 12 )

1 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವು.

2 ಇಸ್ರಾಯೇಲ್ಯರು - ಆತನ ಕೃಪೆಯು ಶಾಶ್ವತವೆಂದು ಹೇಳಲಿ.

3 ಆರೋನನ ಮನೆತನದವರು - ಆತನ ಕೃಪೆಯು ಶಾಶ್ವತವೆಂದು ಹೇಳಲಿ.

4 ಯೆಹೋವನ ಭಕ್ತರು - ಆತನ ಕೃಪೆಯು ಶಾಶ್ವತವೆಂದು ಹೇಳಲಿ.

5 ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು; ಆತನು ಸದುತ್ತರವನ್ನು ದಯಪಾಲಿಸಿ ನನ್ನನ್ನು ವಿಶಾಲಸ್ಥಳದಲ್ಲಿ ಇಟ್ಟನು.

6 ಯೆಹೋವನು ನನಗಿದ್ದಾನೆ; ಭಯಪಡೆನು; ಮನುಷ್ಯನು ನನಗೆ ಏನು ಮಾಡಾನು?

7 ಯೆಹೋವನು ನನಗೆ ಇದ್ದಾನೆ; ಆತನೇ ನನಗೆ ಸಹಾಯಕನು; ನನ್ನ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವೆನು.

8 ಮನುಷ್ಯರಲ್ಲಿ ಭರವಸವಿಡುವದಕ್ಕಿಂತ ಯೆಹೋವನನ್ನು ಆಶ್ರಯಿಸುವದು ಒಳ್ಳೇದು.

9 ಪ್ರಭುಗಳಲ್ಲಿ ಭರವಸವಿಡುವದಕ್ಕಿಂತ ಯೆಹೋವನನ್ನು ಆಶ್ರಯಿಸುವದು ಒಳ್ಳೇದು.

10 ಜನಾಂಗದವರೆಲ್ಲಾ ನನ್ನನ್ನು ಸುತ್ತಿಕೊಂಡರು; ಯೆಹೋವನ ಹೆಸರಿನಿಂದ ಅವರನ್ನು ಸಂಹರಿಸುವೆನು.

11 ಅವರು ಸುತ್ತಲೂ ನನ್ನನ್ನು ಮುತ್ತಿದರು; ಯೆಹೋವನ ಹೆಸರಿನಿಂದ ಅವರನ್ನು ಸಂಹರಿಸುವೆನು.

12 ಅವರು ಜೇನ್ನೊಣಗಳಂತೆ ನನ್ನನ್ನು ಕವಿದರು; ಮುಳ್ಳಿನ ಬೆಂಕಿಯಂತೆ ಕ್ಷಣದಲ್ಲಿ ಅಳಿದುಹೋಗುವರು. ಯೆಹೋವನ ಹೆಸರಿನಿಂದ ಅವರನ್ನು ಸಂಹಸರಿಸುವೆನು.

13 [ವೈರಿಯೇ,] ನನ್ನನ್ನು ಬೀಳ ನೂಕಿದಿ; ಆದರೆ ಯೆಹೋವನು ನನಗೆ ಸಹಾಯ ಮಾಡಿದನು.

14 ನನ್ನ ಬಲವೂ ಕೀರ್ತನೆಯೂ ಯಾಹುವೇ; ಆತನಿಂದ ನನಗೆ ರಕ್ಷಣೆಯುಂಟಾಯಿತು.

15 ಉತ್ಸಾಹಧ್ವನಿಯೂ ಜಯಘೋಷವೂ ನೀತಿವಂತರ ಗುಡಾರಗಳಲ್ಲಿವೆ; ಯೆಹೋವನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.

16 ಯೆಹೋವನ ಬಲಗೈ ಉನ್ನತವಾಗಿದೆ; ಯೆಹೋವನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.

17 ನಾನು ಸಾಯುವದಿಲ್ಲ; ಜೀವದಿಂದಿದ್ದು ಯಾಹುವಿನ ಕ್ರಿಯೆಗಳನ್ನು ಸಾರುವೆನು.

18 ಯಾಹು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು; ಮರಣಕ್ಕೆ ಒಪ್ಪಿಸಲಿಲ್ಲ.

19 ನೀತಿದ್ವಾರಗಳನ್ನು ತೆರೆಯಿರಿ; ಒಳಗೆ ಪ್ರವೇಶಿಸಿ ಯಾಹುವನ್ನು ಕೊಂಡಾಡುವೆನು.

20 ಇದು ಯೆಹೋವನ ಮಂದಿರದ್ವಾರವು; ಇದರೊಳಗೆ ಪ್ರವೇಶಿಸತಕ್ಕವರು ನೀತಿವಂತರೇ.

21 ನನಗೆ ಸದುತ್ತರವನ್ನು ದಯಪಾಲಿಸಿ ರಕ್ಷಿಸಿದಾತನೇ, ನಿನ್ನನ್ನು ಕೊಂಡಾಡುತ್ತೇನೆ.

22 ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು;

23 ಇದು ಯೆಹೋವನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ.

24 ಈ ದಿನವು ಯೆಹೋವನಿಂದಲೇ ನೇಮಕವಾದದ್ದು; ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ.

25 ಯೆಹೋವನೇ, ದಯವಿಟ್ಟು ರಕ್ಷಿಸು; ಯೆಹೋವನೇ, ದಯವಿಟ್ಟು ಸಾಫಲ್ಯಕೊಡು.

26 ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಆಶೀರ್ವಾದ; ಯೆಹೋವನ ಮಂದಿರದಲ್ಲಿರುವ ನಾವು ನಿಮ್ಮನ್ನು ಆಶೀರ್ವದಿಸುತ್ತೇವೆ.

27 ಯೆಹೋವನೇ ದೇವರು; ಆತನು ನಮಗೆ ಪ್ರಕಾಶವನ್ನು ಅನುಗ್ರಹಿಸಿದ್ದಾನೆ. ರೆಂಬೆಗಳನ್ನು ಹಿಡಿದುಕೊಂಡು ಮೆರವಣಿಗೆಯಾಗಿ ಯಜ್ಞವೇದಿಯ ಕೊಂಬುಗಳ ಸಮೀಪಕ್ಕೆ ಬನ್ನಿರಿ.

28 ನೀನು ನನ್ನ ದೇವರು; ನಿನ್ನನ್ನು ಕೊಂಡಾಡುತ್ತೇನೆ; ನನ್ನ ದೇವರೇ, ನಿನ್ನನ್ನು ಘನಪಡಿಸುತ್ತೇನೆ.

29 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾದದ್ದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು