Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 115 - ಕನ್ನಡ ಸತ್ಯವೇದವು J.V. (BSI)


ರಕ್ಷಕನು ಯೆಹೋವನೊಬ್ಬನೇ

1 ನಮ್ಮನ್ನಲ್ಲ, ಯೆಹೋವನೇ, ನಮ್ಮನ್ನಲ್ಲ, ನಿನ್ನ ಪ್ರೀತಿಸತ್ಯತೆಗಳ ನಿವಿುತ್ತವಾಗಿ ನಿನ್ನ ಹೆಸರನ್ನೇ ಘನಪಡಿಸು.

2 ಅವರ ದೇವರು ಎಲ್ಲಿದ್ದಾನೆಂದು ಅನ್ಯರು ಯಾಕೆ ಹೇಳಬೇಕು?

3 ನಮ್ಮ ದೇವರು ಪರಲೋಕದಲ್ಲಿದ್ದಾನೆ; ಆತನು ತನಗೆ ಬೇಕಾದದ್ದನ್ನೆಲ್ಲಾ ಮಾಡುತ್ತಾನೆ.

4 ಅವರ ವಿಗ್ರಹಗಳೋ ಬೆಳ್ಳಿಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ.

5 ಅವು ಬಾಯಿದ್ದರೂ ಮಾತಾಡುವದಿಲ್ಲ; ಕಣ್ಣಿದ್ದರೂ ನೋಡುವದಿಲ್ಲ.

6 ಕಿವಿಯಿದ್ದರೂ ಕೇಳುವದಿಲ್ಲ; ಮೂಗಿದ್ದರೂ ಮೂಸುವದಿಲ್ಲ.

7 ಕೈಯುಂಟು, ಮುಟ್ಟುವದಿಲ್ಲ; ಕಾಲುಂಟು ನಡೆಯುವದಿಲ್ಲ; ಅವುಗಳ ಗಂಟಲಲ್ಲಿ ಶಬ್ದವೇ ಇಲ್ಲ.

8 ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವರೂ ಅವುಗಳಂತೆಯೇ.

9 ಇಸ್ರಾಯೇಲ್ಯರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನೂ ಗುರಾಣಿಯೂ ಆತನೇ.

10 ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನೂ ಗುರಾಣಿಯೂ ಆತನೇ.

11 ಯೆಹೋವನ ಭಕ್ತರೇ, ಯೆಹೋವನಲ್ಲಿ ಭರವಸವಿಡಿರಿ. ಅವರ ಸಹಾಯಕನೂ ಗುರಾಣಿಯೂ ಆತನೇ.

12 ಯೆಹೋವನು ನಮ್ಮನ್ನು ನೆನಪುಮಾಡಿಕೊಂಡಿದ್ದಾನೆ; ಸಣ್ಣವರು ಮೊದಲುಗೊಂಡು ದೊಡ್ಡವರ ಪರ್ಯಂತರ ಎಲ್ಲರನ್ನೂ ಆಶೀರ್ವದಿಸುವನು.

13 ಇಸ್ರಾಯೇಲನ ಮನೆತನದವರನ್ನು ಆಶೀರ್ವದಿಸುವನು; ಆರೋನನ ಮನೆತನದವರನ್ನು ಆಶೀರ್ವದಿಸುವನು. ತನ್ನ ಭಕ್ತರನ್ನು ಆಶೀರ್ವದಿಸುವನು.

14 ಯೆಹೋವನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಅಭಿವೃದ್ಧಿಪಡಿಸಲಿ;

15 ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ. ಆತನು ಭೂಪರಲೋಕಗಳನ್ನು ಉಂಟುಮಾಡಿದ್ದಾನೆ.

16 ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ.

17 ಸತ್ತವರು ಯಾಹುವನ್ನು ಸ್ತುತಿಸುವದಿಲ್ಲ; ಮೌನಲೋಕವನ್ನು ಸೇರಿದವರಲ್ಲಿ ಯಾರೂ ಆತನನ್ನು ಕೀರ್ತಿಸುವದಿಲ್ಲ.

18 ನಾವೋ ಇಂದಿನಿಂದ ಸದಾಕಾಲವೂ ಯಾಹುವನ್ನು ಕೊಂಡಾಡುವೆವು. ಯಾಹುವಿಗೆ ಸ್ತೋತ್ರ!

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು