Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 111 - ಕನ್ನಡ ಸತ್ಯವೇದವು J.V. (BSI)


ದೇವಸ್ತುತಿ
( ಕೀರ್ತ. 112 )

1 ಯಾಹುವಿಗೆ ಸ್ತೋತ್ರ! ನಾನು ಯೆಹೋವನನ್ನು ಕೊಂಡಾಡುವೆನು; ಯಥಾರ್ಥರ ಕೂಟದಲ್ಲಿಯೂ ನೆರೆದ ಸಭೆಯಲ್ಲಿಯೂ ಮನಃಪೂರ್ವಕವಾಗಿ ಕೀರ್ತಿಸುವೆನು.

2 ಯೆಹೋವನ ಕೃತ್ಯಗಳು ಮಹತ್ತಾದವುಗಳು; ಅವುಗಳಲ್ಲಿ ಸಂತೋಷಿಸುವವರು ಅವುಗಳನ್ನೇ ಧ್ಯಾನಿಸುವರು.

3 ಆತನ ಕಾರ್ಯವು ಘನಮಾನಗಳುಳ್ಳದ್ದು; ಆತನ ನೀತಿಯು ಸದಾಕಾಲವೂ ಇರುವದು.

4 ಆತನು ತನ್ನ ಅದ್ಭುತಕೃತ್ಯಗಳ ಜ್ಞಾಪಕವನ್ನು ಉಳಿಯಮಾಡಿದ್ದಾನೆ. ಯೆಹೋವನು ದಯೆಯೂ ಕನಿಕರವೂ ಉಳ್ಳವನು.

5 ತನ್ನಲ್ಲಿ ಭಯಭಕ್ತಿಯುಳ್ಳವರಿಗೆ ಆಹಾರವನ್ನು ಕೊಟ್ಟಿದ್ದಾನೆ; ತನ್ನ ಒಡಂಬಡಿಕೆಯನ್ನು ಯಾವಾಗಲೂ ನೆನಪಿನಲ್ಲಿಡುವನು.

6 ಆತನು ಅನ್ಯಜನಗಳ ಸ್ವಾಸ್ತ್ಯವನ್ನು ತನ್ನ ಪ್ರಜೆಗೆ ಕೊಡುವದರ ಮೂಲಕ ಸ್ವಪ್ರತಾಪವನ್ನು ತೋರ್ಪಡಿಸಿದ್ದಾನೆ.

7 ಆತನ ಕೈಕೆಲಸಗಳು ನೀತಿಸತ್ಯತೆಗಳನ್ನು ಪ್ರಕಟಿಸುತ್ತವೆ; ಆತನ ನಿಯಮಗಳೆಲ್ಲಾ ಸ್ಥಿರವಾಗಿವೆ.

8 ಅವು ದೃಢವಾದ ಆಧಾರವುಳ್ಳವು; ಯುಗಯುಗಾಂತರಕ್ಕೂ ಇರುವವು. ಸತ್ಯನೀತಿಗಳಿಗನುಸಾರವಾಗಿ ವಿಧಿಸಲ್ಪಟ್ಟಿವೆ.

9 ಯೆಹೋವನು ತನ್ನ ಜನರಿಗೆ ವಿಮೋಚನೆಯನ್ನುಂಟುಮಾಡಿದ್ದಾನೆ; ತನ್ನ ಒಡಂಬಡಿಕೆಯನ್ನು ನಿತ್ಯಕ್ಕೂ ಸ್ಥಾಪಿಸಿದ್ದಾನೆ; ಆತನ ನಾಮವು ಪರಿಶುದ್ಧವೂ ಭಯಂಕರವೂ ಆಗಿದೆ.

10 ಯೆಹೋವನ ಭಯವೇ ಜ್ಞಾನಕ್ಕೆ ಮೂಲವು; ಆತನ ಕಟ್ಟಳೆಗಳನ್ನು ನಡಿಸುವವರು ಪೂರ್ಣ ವಿವೇಕಿಗಳು. ಆತನ ಸ್ತುತಿಯು ನಿರಂತರವಾದದ್ದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು