Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 108 - ಕನ್ನಡ ಸತ್ಯವೇದವು J.V. (BSI)


ಸ್ತೋತ್ರವೂ ಜಯವಾಗ್ದಾನ ನೆರವೇರಬೇಕೆಂಬ ಪ್ರಾರ್ಥನೆಯೂ ಹಾಡು; ದಾವೀದನ ಕೀರ್ತನೆ

1 ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನಾನು ಬಾರಿಸುತ್ತಾ ಹಾಡುವೆನು; ನನ್ನ ಅಂತರಂಗವೂ ಸಹ.

2 ಸ್ವರಮಂಡಲವೇ, ಕಿನ್ನರಿಯೇ, ಎಚ್ಚರವಾಗಿರಿ. ಸಂಕೀರ್ತನೆಯಿಂದ ಉದಯವನ್ನು ಮುಂಗೊಳ್ಳುವೆನು.

3 ಯೆಹೋವನೇ, ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು; ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು.

4 ಯಾಕಂದರೆ ನಿನ್ನ ಕೃಪೆಯು ಆಕಾಶಕ್ಕಿಂತ ದೊಡ್ಡದಾಗಿದೆ. ನಿನ್ನ ಸತ್ಯತೆಯು ಮುಗಿಲನ್ನು ನಿಲುಕುತ್ತದೆ.

5 ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.

6 ನಿನ್ನ ಪ್ರಿಯರಾದ ನಮ್ಮ ಮೊರೆಯನ್ನು ಲಾಲಿಸಿ ರಕ್ಷಿಸು; ನಿನ್ನ ಭುಜಬಲದಿಂದ ನಮ್ಮನ್ನು ಜಯಗೊಳಿಸು.

7 ದೇವರು ತನ್ನ ಪವಿತ್ರತ್ವವನ್ನು ಸಾಕ್ಷಿಮಾಡಿ ನುಡಿದಿದ್ದಾನೆ. ಜಯಘೋಷಮಾಡುವೆನು; ಶೆಖೆಮ್ ಪ್ರದೇಶವನ್ನು ಹಂಚುವೆನು. ಸುಖೋತ್ ಬೈಲನ್ನು ಅಳೆದುಕೊಡುವೆನು.

8 ಗಿಲ್ಯಾದ್ ಸೀಮೆಯೂ ಮನಸ್ಸೆಯ ದೇಶವೂ ನನ್ನವು; ಎಫ್ರಾಯೀಮ್ ಗೋತ್ರವು ನನಗೆ ಶಿರಸ್ತ್ರಾಣವು. ನನ್ನ ರಾಜದಂಡವು ಯೆಹೂದಕುಲವೇ.

9 ಮೋವಾಬ್ ಪ್ರದೇಶವು ನನ್ನ ಸ್ನಾನಪಾತ್ರೆಯು; ಎದೋಮ್ ಸೀಮೆಯು ನನ್ನ ಕೆರಗಳನ್ನು ಬಿಡುವ ಸ್ಥಳ. ಫಿಲಿಷ್ಟಿಯದ ವಿಷಯ ಜಯಘೋಷ ಮಾಡುವೆನು.

10 ಕೋಟೆಕೊತ್ತಲುಗಳುಳ್ಳ ನಗರಕ್ಕೆ ನನ್ನನ್ನು ಕರೆದುಕೊಂಡು ಹೋಗುವವರು ಯಾರು? ಎದೋಮ್ ಪ್ರಾಂತದೊಳಗೆ ನನ್ನನ್ನು ಸೇರಿಸುವವರು ಯಾರು?

11 ದೇವರೇ, ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲವಲ್ಲಾ! ದೇವರೇ, ನಮ್ಮನ್ನು ಕೈಬಿಟ್ಟಿಯಾ?

12 ನಮಗೆ ಕೈಕೊಟ್ಟು ಶತ್ರುಬಾಧೆಯಿಂದ ಪಾರುಮಾಡು. ಮನುಷ್ಯರ ಸಹಾಯವು ವ್ಯರ್ಥ.

13 ದೇವರಿಂದ ಶೂರಕೃತ್ಯಗಳನ್ನು ನಡಿಸುವೆವು; ನಮ್ಮ ವೈರಿಗಳನ್ನು ತುಳಿದುಬಿಡುವವನು ಆತನೇ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು