Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 106 - ಕನ್ನಡ ಸತ್ಯವೇದವು J.V. (BSI)


ಯೆಹೋವಕ್ಷಮಾಕೀರ್ತನೆ
( ಕೀರ್ತ. 78 , 105 )

1 ಯಾಹುವಿಗೆ ಸ್ತೋತ್ರ! ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವದು.

2 ಯೆಹೋವನ ಮಹತ್ಕಾರ್ಯಗಳನ್ನು ಯಾರು ವರ್ಣಿಸಬಲ್ಲರು? ಆತನನ್ನು ತಕ್ಕಂತೆ ಕೀರ್ತಿಸುವದು ಯಾರಿಂದಾದೀತು?

3 ಯಾವಾಗಲೂ ನ್ಯಾಯವನ್ನು ಕಾಪಾಡುವವರೂ ನೀತಿಯನ್ನು ಪಾಲಿಸುವವರೂ ಧನ್ಯರು.

4 ಯೆಹೋವನೇ, ನನ್ನನ್ನು ನೆನಪುಮಾಡಿಕೊಂಡು ನಿನ್ನ ಪ್ರಜೆಗೆ ತೋರಿಸುವ ದಯೆಯನ್ನು ನನಗೂ ತೋರಿಸು. ನನ್ನನ್ನು ರಕ್ಷಿಸಲಿಕ್ಕೆ ಬಾ,

5 ಆಗ ನೀನು ಆರಿಸಿಕೊಂಡ ಪ್ರಜೆಯ ಏಳಿಗೆಯನ್ನು ನೋಡಿ ನಾನೂ ಅವರೊಂದಿಗೆ ಸಂತೋಷಿಸುವೆನು; ನಿನ್ನ ಸ್ವಕೀಯರೊಂದಿಗೆ ನಾನೂ ಹಿಗ್ಗುವೆನು.

6 ನಮ್ಮ ಪಿತೃಗಳಂತೆ ನಾವೂ ಪಾಪಿಗಳು; ಅಪರಾಧಮಾಡಿದೆವು; ದುಷ್ಟತನವನ್ನು ನಡಿಸಿದೆವು.

7 ನಮ್ಮ ಪೂರ್ವಿಕರು ಐಗುಪ್ತದಲ್ಲಿ ನಿನ್ನ ಅದ್ಭುತಕ್ರಿಯೆಗಳನ್ನು ಲಕ್ಷಿಸಲಿಲ್ಲ; ನಿನ್ನ ಕೃಪಾತಿಶಯವನ್ನು ಸ್ಮರಿಸಲಿಲ್ಲ. ಕೆಂಪು ಸಮುದ್ರದ ಬಳಿಯಲ್ಲಿ ನಿನಗೆ ತಿರುಗಿಬಿದ್ದರು.

8 ಆದರೂ ಆತನು ತನ್ನ ಹೆಸರಿನ ನಿವಿುತ್ತವಾಗಿಯೂ ತನ್ನ ಶೌರ್ಯವನ್ನು ಪ್ರಕಟಿಸುವದಕ್ಕಾಗಿಯೂ ಅವರನ್ನು ರಕ್ಷಿಸಿದನು.

9 ಆತನು ಗದರಿಸಲು ಕೆಂಪು ಸಮುದ್ರವು ಒಣಗಿ ಹೋಯಿತು; ಅಡವಿಯನ್ನೋ ಎಂಬಂತೆ ಸಾಗರವನ್ನು ದಾಟಿಸಿದನು.

10 ಹಗೆಗಳ ಕೈಯಿಂದ ಅವರನ್ನು ತಪ್ಪಿಸಿದನು; ವೈರಿಹಸ್ತದಿಂದ ಬಿಡಿಸಿದನು.

11 ಜಲರಾಶಿಯು ಅವರ ವಿರೋಧಿಗಳನ್ನು ಮುಚ್ಚಿಬಿಟ್ಟಿತು; ಒಬ್ಬನೂ ಉಳಿಯಲಿಲ್ಲ.

12 ಆಗ ಅವರು ಆತನ ಮಾತು ನಂಬಿ ಆತನನ್ನು ಕೀರ್ತಿಸಿದರು.

13 ಆದರೆ ಅವರು ಬೇಗನೆ ಆತನ ಕೆಲಸಗಳನ್ನು ಮರೆತು ಆತನ ಸಂಕಲ್ಪವನ್ನು ಕಾದಿರದೆ

14 ಅರಣ್ಯದಲ್ಲಿ ಆಶಾತುರರಾಗಿ ಅಡವಿಯಲ್ಲಿ ದೇವರನ್ನು ಪರೀಕ್ಷಿಸಿದರು.

15 ಆತನು ಅವರ ಆಶೆಯನ್ನು ಪೂರೈಸಿದರೂ ಅವರ ಪ್ರಾಣಕ್ಕೆ ಕ್ಷಯವನ್ನು ಬರಮಾಡಿದನು.

16 ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ ಯೆಹೋವನು ಪ್ರತಿಷ್ಠಿಸಿದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಡಲು

17 ಭೂವಿುಯು ಬಾಯ್ದೆರೆದು ದಾತಾನನನ್ನು ನುಂಗಿಬಿಟ್ಟಿತು; ಅಬಿರಾಮನ ಕಡೆಯವರನ್ನು ಮುಚ್ಚಿಬಿಟ್ಟಿತು.

18 ಮತ್ತು ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು; ಅಗ್ನಿಜ್ವಾಲೆಯು ದುಷ್ಟರನ್ನು ದಹಿಸಿಬಿಟ್ಟಿತು.

19 ಹೋರೇಬಿನಲ್ಲಿ ಎರಕದ ಬಸವನನ್ನು ಮಾಡಿ ಅದಕ್ಕೆ ಅಡ್ಡಬಿದ್ದರು.

20 ಹೀಗೆ ಅವರು ತಮ್ಮ ದಿವ್ಯಮಹಿಮೆಯನ್ನು ಬಿಟ್ಟು ಹುಲ್ಲುತಿನ್ನುವ ಎತ್ತಿನ ಜಡಮೂರ್ತಿಯನ್ನು ಹಿಡಿದುಕೊಂಡರು.

21 ಐಗುಪ್ತದಲ್ಲಿ ಮಹತ್ತುಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ

22 ಕೆಂಪುಸಮುದ್ರದ ಬಳಿಯಲ್ಲಿ ಘೋರ ಕೃತ್ಯಗಳನ್ನೂ ನಡಿಸಿದ ತಮ್ಮ ರಕ್ಷಕನಾದ ದೇವರನ್ನು ಮರೆತೇಬಿಟ್ಟರು.

23 ಆದದರಿಂದ ಆತನು ಅವರನ್ನು ಸಂಹರಿಸುವೆನೆನ್ನಲು ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು.

24 ಮತ್ತು ಅವರು ಆ ರಮಣೀಯದೇಶವನ್ನು ತಿರಸ್ಕರಿಸಿ ಆತನ ಮಾತನ್ನು ನಂಬಲಿಲ್ಲ.

25 ತಮ್ಮ ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ ಯೆಹೋವನ ಮಾತಿಗೆ ಕಿವಿಗೊಡಲಿಲ್ಲ.

26 ಇದರಿಂದ ಆತನು ಅವರನ್ನು ಅರಣ್ಯದಲ್ಲಿಯೇ ಬೀಳಿಸುವೆನೆಂದೂ

27 ಅವರ ಸಂತಾನವನ್ನು ದೇಶಾಂತರಗಳಲ್ಲಿ ಚದರಿಸಿ ಅನ್ಯಜನಾಂಗಗಳ ನಡುವೆ ನಾಶಮಾಡುವೆನೆಂದೂ ಕೈಯೆತ್ತಿದನು.

28 ಅವರು ತಮ್ಮನ್ನು ಬಾಳ್‍ಪೆಗೋರನ ಸೇವೆಗೆ ಒಪ್ಪಿಸಿ ಜಡಮೂರ್ತಿಗಳಿಗೆ ಅರ್ಪಿಸಿದ್ದನ್ನು ಊಟಮಾಡಿದರು.

29 ಈ ತಮ್ಮ ಕ್ರಿಯೆಗಳಿಂದ ಆತನನ್ನು ಕೆಣಕಿದರು; ಅವರಲ್ಲಿ ವ್ಯಾಧಿಯುಂಟಾಯಿತು.

30 ಫಿನೆಹಾಸನು ಎದ್ದು ಅವರನ್ನು ದಂಡಿಸಲು ಆ ವ್ಯಾಧಿಯು ನಿಂತುಹೋಯಿತು.

31 ಅವನು ಮಾಡಿದ್ದು ತಲತಲಾಂತರಕ್ಕೂ ನೀತಿಯೆಂದು ಎಣಿಸಲ್ಪಟ್ಟಿತು.

32 ಮತ್ತು ಅವರು ಮೆರೀಬದ ಪ್ರವಾಹ ಸಮೀಪದಲ್ಲಿ ಆತನನ್ನು ರೇಗಿಸಿದರು. ಅವರ ದೆಸೆಯಿಂದ ಮೋಶೆಗೆ ಕೇಡುಂಟಾಯಿತು.

33 ಅವರು ದೇವರಾತ್ಮನಿಗೆ ವಿರೋಧವಾಗಿ ನಿಂತದ್ದರಿಂದ ಮೋಶೆ ದುಡುಕಿ ಮಾತಾಡಿದನು.

34 ಅನ್ಯಜನಾಂಗದವರನ್ನು ಸಂಹರಿಸಬೇಕೆಂಬ ಯೆಹೋವನ ಆಜ್ಞೆಗೆ ಅವಿಧೇಯರಾಗಿ

35 ಅವರೊಡನೆ ಕೂಡಿಕೊಂಡು ಅವರ ದುರಾಚಾರಗಳನ್ನು ಕಲಿತುಕೊಂಡರು.

36 ಅವರ ವಿಗ್ರಹಗಳನ್ನು ಸೇವಿಸಿದರು; ಅವು ಅವರಿಗೆ ಉರುಲಿನಂತಾದವು.

37 ಅವರು ತಮ್ಮ ಗಂಡು ಹೆಣ್ಣು ಮಕ್ಕಳನ್ನು ಭೂತಗಳಿಗೆ ಬಲಿಕೊಟ್ಟರು.

38 ಕಾನಾನ್ಯರ ಮೂರ್ತಿಗಳ ಅರ್ಪಣೆಗೋಸ್ಕರ ತಮ್ಮ ಮಕ್ಕಳ ನಿರಪರಾಧರಕ್ತವನ್ನು ಸುರಿಸಿದರು; ಇಂಥ ಕೊಲೆಗಳಿಂದ ದೇಶವನ್ನು ಹೊಲೆಮಾಡಿದರು.

39 ಅವರು ತಮ್ಮ ದುಷ್ಕೃತ್ಯಗಳಿಂದ ಅಶುದ್ಧರಾದರು. ದುರಾಚಾರಗಳಿಂದ ದೇವದ್ರೋಹಿಗಳಾದರು.

40 ಆಗ ಯೆಹೋವನ ಕೋಪವು ಅವರ ಮೇಲೆ ಉರಿಗೊಂಡಿತು; ಆತನು ತನ್ನ ಸ್ವಾಸ್ತ್ಯವಾದ ಪ್ರಜೆಗಳನ್ನು ಅಸಹಿಸಿ

41 ಅವರನ್ನು ಅನ್ಯಜನಾಂಗಗಳ ಕೈಗೆ ಒಪ್ಪಿಸಿದನು. ವೈರಿಗಳು ಅವರ ಮೇಲೆ ಅಧಿಕಾರ ನಡಿಸಿದರು;

42 ಶತ್ರುಗಳು ಅವರನ್ನು ಕುಗ್ಗಿಸಿದರು; ಅವರ ಕೈಕೆಳಗೆ ತಗ್ಗಿಹೋದರು.

43 ಆತನು ಅವರನ್ನು ಅನೇಕಾವರ್ತಿ ರಕ್ಷಿಸಿದರೂ ಅವರು ತಮ್ಮ ಆಲೋಚನೆಯನ್ನು ಅನುಸರಿಸಿ ಅವಿಧೇಯರಾದರು; ತಮ್ಮ ಅಕ್ರಮದಿಂದಲೇ ಹೀನಸ್ಥಿತಿಗೆ ಬಂದರು.

44 ಆದರೆ ಆತನು ಕಷ್ಟದಲ್ಲಿದ್ದ ಅವರ ಮೊರೆಯನ್ನು ಕೇಳಿ ಪರಾಂಬರಿಸಿದನು.

45 ತನ್ನ ಒಡಂಬಡಿಕೆಯನ್ನು ನೆನಪುಮಾಡಿಕೊಂಡು ತನ್ನ ಕೃಪಾತಿಶಯದಿಂದ ಅವರನ್ನು ಕನಿಕರಿಸಿದನು.

46 ಅವರನ್ನು ಸೆರೆಯೊಯ್ದವರಲ್ಲಿ ಅವರ ಮೇಲೆ ದಯೆಹುಟ್ಟಿಸಿದನು.

47 ಯೆಹೋವನೇ, ನಮ್ಮ ದೇವರೇ, ರಕ್ಷಿಸು; ಅನ್ಯಜನಗಳಲ್ಲಿ ಚದರಿರುವ ನಮ್ಮನ್ನು ತಿರುಗಿ ಕೂಡಿಸು. ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು.

48 ಇಸ್ರಾಯೇಲ್‍ದೇವನಾದ ಯೆಹೋವನಿಗೆ ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ; ಸರ್ವಜನರೂ ಆಮೆನ್ ಎನ್ನಲಿ. ಯಾಹುವಿಗೆ ಸ್ತೋತ್ರ!

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು