Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಕೀರ್ತನೆಗಳು 103 - ಕನ್ನಡ ಸತ್ಯವೇದವು J.V. (BSI)


ದೇವಕೃಪಾಕೀರ್ತನೆ ದಾವೀದನ ಕೀರ್ತನೆ

1 ನನ್ನ ಮನವೇ, ಯೆಹೋವನನ್ನು ಕೊಂಡಾಡು; ನನ್ನ ಸರ್ವೇಂದ್ರಿಯಗಳೇ, ಆತನ ಪವಿತ್ರನಾಮವನ್ನು ಕೀರ್ತಿಸಿರಿ.

2 ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.

3 ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷವಿುಸುವವನೂ ಸಮಸ್ತರೋಗಗಳನ್ನು ವಾಸಿಮಾಡುವವನೂ

4 ನಿನ್ನ ಜೀವವನ್ನು ನಾಶದಿಂದ ತಪ್ಪಿಸುವವನೂ ಪ್ರೀತಿಕೃಪೆಗಳೆಂಬ ಕಿರೀಟದಿಂದ ನಿನ್ನನ್ನು ಶೃಂಗರಿಸುವವನೂ ಆಗಿದ್ದಾನೆ.

5 ಶ್ರೇಷ್ಠವರಗಳಿಂದ ನಿನ್ನ ಆಶೆಯನ್ನು ಪೂರ್ತಿಗೊಳಿಸುತ್ತಾನೆ; ಹದ್ದಿಗೆ ಬರುವಂತೆಯೇ ನಿನಗೆ ಯೌವನವನ್ನು ತಿರಿಗಿ ಬರಮಾಡುತ್ತಾನೆ.

6 ಯೆಹೋವನು ನೀತಿಯನ್ನು ಸಾಧಿಸುವವನಾಗಿ ಕುಗ್ಗಿಹೋದವರೆಲ್ಲರ ನ್ಯಾಯವನ್ನು ಸ್ಥಾಪಿಸುತ್ತಾನೆ.

7 ಆತನು ಮೋಶೆಗೆ ತನ್ನ ಮಾರ್ಗವನ್ನೂ ಇಸ್ರಾಯೇಲ್ಯರಿಗೆ ತನ್ನ ಕೃತ್ಯಗಳನ್ನೂ ಪ್ರಕಟಿಸಿದನು.

8 ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು.

9 ಆತನು ಯಾವಾಗಲೂ ತಪ್ಪುಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ.

10 ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ.

11 ಭೂವಿುಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ.

12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.

13 ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ.

14 ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.

15 ಮನುಷ್ಯನ ಆಯುಷ್ಕಾಲವು ಹುಲ್ಲಿನಂತಿದೆ; ಅವನು ಅಡವಿಯ ಹೂವಿನ ಹಾಗೆ ಶೋಭಿಸುತ್ತಾನೆ.

16 ಗಾಳಿಬಡಿಯುತ್ತಲೇ ಅದು ಹೋಗುವದು; ಅದರ ಸ್ಥಳವು ಅದನ್ನು ತಿರುಗಿ ಕಾಣುವದಿಲ್ಲ.

17 ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ದಯವು ಯುಗಯುಗಾಂತರಗಳವರೆಗೂ ಇರುತ್ತದೆ.

18 ಆತನ ನಿಬಂಧನೆಗಳನ್ನು ಕೈಕೊಂಡು ಆತನ ವಿಧಿಗಳನ್ನು ನೆನಪಿನಲ್ಲಿಟ್ಟುಕೊಂಡು ನಡೆಯುವವರ ಮಕ್ಕಳು ಮೊಮ್ಮಕ್ಕಳವರೆಗೂ ಆತನು ತನ್ನ ನೀತಿಯನ್ನು ಸಾಧಿಸುವನು.

19 ಯೆಹೋವನು ಮೇಲಣ ಲೋಕದಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನು ಸಮಸ್ತವನ್ನೂ ಆಳುತ್ತಾನೆ.

20 ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೇ, ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ.

21 ಆತನ ಸೈನ್ಯಗಳೇ, ಆತನ ಮೆಚ್ಚಿಕೆಯನ್ನು ನೆರವೇರಿಸುವ ಸೇವಕರೇ, ಯೆಹೋವನನ್ನು ಕೊಂಡಾಡಿರಿ.

22 ಆತನ ರಾಜ್ಯದ ಸರ್ವಸ್ಥಳಗಳಲ್ಲಿರುವ ಎಲ್ಲಾ ಸೃಷ್ಟಿಗಳೇ, ಯೆಹೋವನನ್ನು ಕೊಂಡಾಡಿರಿ. ನನ್ನ ಮನವೇ, ಯೆಹೋವನನ್ನು ಕೊಂಡಾಡು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು